

ನವಲಗುಂದ: ತಾಲೂಕಿನ ಹಾಲಕುಸುಗಲ್ಲ ಗ್ರಾಮದ ಶಾಲೆಗೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಕೂಡಲೇ ದುರಸ್ತಿಪಡಿಸಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು ಗುರುವಾರ ಬಸ್ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ರಸ್ತೆ ದುರಸ್ತಿ ಗೊಳಿಸುವಂತೆ ಹಿಂದಿನ ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಹಾಗೂ ಶಾಸಕ ಎನ್.ಎಚ್. ಕೋನರಡ್ಡಿ ಅವರಿಗೂ ಮನವಿ ಸಲ್ಲಿಸಲಾಗಿತ್ತು. ಆದರೆ ಇನ್ನೂತನಕ ಪ್ರಯೋಜನವಾಗಿಲ್ಲ. ಶೀಘ್ರದಲ್ಲಿ ರಸ್ತೆ ದುರಸ್ತಿಗೊಳಿಸದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಶಾಲೆಗೆ ತೆರಳುವ ರಸ್ತೆಯು ಗ್ರಾಮದ ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಕೇಳಿದರೆ, ಅನಿದಾನವಿಲ್ಲ ಎಂದು ಹೇಳುತ್ತಿದ್ದಾರೆ. ಈ ಕುರಿತು ಗ್ರಾಪಂ ಸದಸ್ಯರ ನಿಯೋಗ ಜಿಲ್ಲಾಧಿಕಾರಿ ಭೇಟಿ ಮಾಡಿ ಮನವಿ ಸಲ್ಲಿಸಿದೆ. ಆದರೂ ಪ್ರಯೋಜನವಾಗಿಲ್ಲ. | ಬಿ.ಎಲ್. ನಿಡುವಣಿ ಗ್ರಾಪಂ ಸದಸ್ಯ, ಹಾಲಕುಸಗಲ್ಲ