

ರೋಣ: ಪಟ್ಟಣದಿಂದ ಸವಡಿ ಗ್ರಾಮಕ್ಕೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು ಸೋಮವಾರ ಬಸ್ ನಿಲ್ದಾಣದಲ್ಲಿ ಬಸ್ಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ಈ ಮೊದಲು ಪಟ್ಟಣದಿಂದ ಸವಡಿ ಗ್ರಾಮಕ್ಕೆ ಮಧ್ಯಾಹ್ನ 3 ಗಂಟೆಗೆ ಬಸ್ ಬಿಡಲಾಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಬಸ್ ಬಿಡದೆ ಇರುವುದರಿಂದ ಸವಡಿ ಗ್ರಾಮದಿಂದ ರೋಣ ಪಟ್ಟಣಕ್ಕೆ ವಿದ್ಯಾರ್ಜನೆಗೆಂದು ಹೋಗುವ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಊರು ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿ ಬಸ್ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಮಧ್ಯ ಪ್ರವೇಶಿಸಿದ ಸಾರಿಗೆ ಸಿಬ್ಬಂದಿ ತಾಂತ್ರಿಕ ತೊಂದರೆಯಿಂದ ಬಸ್ ವಿಳಂಬವಾಗಿದ್ದು, ಮುಂದಿನ ದಿನಗಳಲ್ಲಿ ಹೀಗಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿ ತಕ್ಷಣಕ್ಕೆ ಸವಡಿ ಗ್ರಾಮಕ್ಕೆ ಎರಡು ಬಸ್ ಬಿಟ್ಟರು. ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು.