

ಮೈಸೂರು: ಮಹಾರಾಣಿ ಮಹಿಳಾ ಕಲಾ ಕಾಲೇಜು ಸ್ನಾತಕೋತ್ತರ ವಿಭಾಗದಲ್ಲಿನ ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ ಉಂಟಾಗಿರುವ ವಿದ್ಯಾರ್ಥಿವೇತನ, ಶುಲ್ಕಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ ಆರ್ಗನೈಜೇಷನ್‌ನ (ಎಐಡಿಎಸ್‌ಒ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಮೈವಿವಿ ಕಾರ್ಯಸೌಧ ಕ್ರಾಫರ್ಡ್ ಹಾಲ್ ಎದುರು ಸೋಮವಾರ ಜಮಾವಣೆಗೊಂಡ ನೂರಾರು ವಿದ್ಯಾರ್ಥಿಗಳು ಘೋಷಣೆ ಕೂಗಿ ಅಸಮಾಧಾನ ಹೊರಹಾಕಿದರು.
ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಶುಲ್ಕದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ವಿದ್ಯಾರ್ಥಿಗಳು ಕಾಲೇಜಿಗೆ ಸೇರಬೇಕಾದರೆ 600 ರೂ. ಪಾವತಿಸಿಕೊಂಡು ದಾಖಲಾತಿ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಸಂಪೂರ್ಣ ವಿದ್ಯಾರ್ಥಿವೇತನ ಬಂದಿಲ್ಲ.
ಬದಲಾಗಿ ಪ್ರಥಮ ಮತ್ತು ದ್ವಿತೀಯ ವರ್ಷದಲ್ಲಿ ಸ್ನಾತಕೋತ್ತರ ಓದುತ್ತಿರುವ ವಿದ್ಯಾರ್ಥಿಗಳಿಗೆ 2000, 4000 ರೂ. ಹೀಗೆ ಅತಿ ಕಡಿಮೆ ವಿದ್ಯಾರ್ಥಿವೇತನ ನೀಡಲಾಗಿದೆ. ಆದರೆ, ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ 11,000 ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ 19,498 ರೂ. ಕಾಲೇಜಿಗೆ ಶುಲ್ಕವನ್ನು ಕಟ್ಟಬೇಕೆಂದು ಸೂಚಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗಿದ್ದಾರೆ ಎಂದು ಹೇಳಿದರು.
ಜತೆಗೆ ದ್ವಿತೀಯ ವರ್ಷ ಓದುತ್ತಿರುವ ವಿದ್ಯಾರ್ಥಿಗಳಿಗೆ 1, 2, 3ನೇ ಸೆಮಿಸ್ಟರ್ ಓದುವಾಗ ಯಾವುದೇ ರೀತಿ ಪರೀಕ್ಷಾ ಶುಲ್ಕವನ್ನು ಪಾವತಿಸಲು ಸೂಚಿಸಿರಲಿಲ್ಲ. ಆದರೆ ಈಗ ಏಕಾಏಕಿ ಒಟ್ಟಿಗೆ ಮೂರು ಸೆಮಿಸ್ಟರ್‌ಗಳ ಪರೀಕ್ಷಾ ಶುಲ್ಕವನ್ನೂ ಈಗಲೇ ಕಟ್ಟಬೇಕೆಂದು ಒತ್ತಾಯಿಸಲಾಗುತ್ತಿದೆ.
ಆದರೆ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಯುಯುಸಿಎಂಎಸ್ ಪೋರ್ಟ್‌ನಲ್ಲಿ ಪರೀಕ್ಷಾ ಶುಲ್ಕವನ್ನು ಕಟ್ಟುವಂತೆ ತೋರಿಸುತ್ತಿಲ್ಲ. ಇದು ವಿದ್ಯಾರ್ಥಿಗಳಲ್ಲಿ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಜತೆಗೆ ದಿಢೀರ್ ಶುಲ್ಕ ಪಾವತಿಸಿ ಎಂದು ಹೇಳಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ. ಆದ್ದರಿಂದ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಎಐಡಿಎಸ್‌ಒ ಉಪಾಧ್ಯಕ್ಷರಾದ ನಿತಿನ್, ಸ್ವಾತಿ, ಮಹಾರಾಣಿ ಸ್ನಾತಕೋತ್ತರ ಕಲಾ ವಿಭಾಗದ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.