

ಔರಾದ್: ಉಪನ್ಯಾಸಕರ ಕೊರತೆಯಿಂದ ನಮ್ಮ ಬದುಕು ಹಾಳಾಗುತ್ತಿದೆ. ಕಾಲೇಜಿನಲ್ಲಿ ಸಮರ್ಪಕ ಸೌಲಭ್ಯಗಳು ಇಲ್ಲದ ಕಾರಣ ಪಾಠ-ಪ್ರವಚನಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಬುಧವಾರ ತರಗತಿ ಬಹಿಷ್ಕರಿಸಿ ಔರಾದ್ -ಬೀದರ್ ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರೊಂದಿಗೆ ಪಟ್ಟಣದ ಬಿಎಸ್‌ಎನ್‌ಎಲ್ ಕಚೇರಿಯ ಬಳಿ ಔರಾದ್-ಬೀದರ್ ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆದು ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಕಾಲೇಜಿನಲ್ಲಿ ಅನೇಕ ವರ್ಷಗಳಿಂದ ಉಪನ್ಯಾಸಕರ ಕೊರತೆ ಇದೆ. ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಕಾಲೇಜಿನಲ್ಲಿ ಒರ್ವ ಉಪನ್ಯಾಸಕರನ್ನು ಮಾತ್ರ ನೇಮಿಸಿದೆ. ಅವರು ಕೂಡ ಸದ್ಯ ಪ್ರಾಂಶುಪಾಲರ ಹುದ್ದೆ ನಿರ್ವಹಿಸುತ್ತಿದ್ದಾರೆ. ಕಾಲೇಜಿನಲ್ಲಿ ಉಪನ್ಯಾಸಕರ ನೇಮಕ ಮಾಡಲು ಆಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಉಪನ್ಯಾಸಕರ ನೇಮಕ ಮಾಡುವ ಮೂಲಕ ನಮ್ಮ ಸಮಸ್ಯೆಗೆ ಸ್ಪಂದಿಸಬೇಕು. ಇಲ್ಲವಾದಲ್ಲಿ ಕಾಲೇಜಿನ ಆವರಣದಲ್ಲಿಯೇ ಉಪವಾಸ ಧರಣಿ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಾರಿಗೆ ಬಸ್‌ಗಳು ಕಾಲೇಜಿನ ಬಳಿ ನಿಲ್ಲಿಸುವಂತೆ ಕೋರಿಕೆಯ ಮೇರೆಗೆ ನಿಲುಗಡೆ ನಾಮಫಲಕ ಹಾಕಲಾಗಿದೆ. ಆದರೆ ಕೆಲ ಬಸ್‌ಗಳು ನಿಲ್ಲಿಸುತ್ತಿಲ್ಲ ಎಂದು ದೂರಿದರು. ಸ್ಥಳಕ್ಕೆ ಸಾರಿಗೆ ಘಟಕ ಅಧಿಕಾರಿಗಳು ಬಂದು ಇನ್ಮುಂದೆ ಬಸ್ ನಿಲ್ಲಿಸುವಂತೆ ಎಲ್ಲರಿಗೂ ಸೂಚನೆ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಬರೆದ ಮನವಿಪತ್ರವನ್ನು ತಹಸೀಲ್ದಾರ್ ಅವರಿಗೆ ಸಲ್ಲಿಸಲಾಯಿತು. ಪಿಎಸ್‌ಐ ವಾಸೀಮ್ ಪಟೇಲ್, ಎಬಿವಿಪಿ ಜಿಲ್ಲಾ ಸಂಚಾಲಕ ಶಶಿಕಾಂತ ರ‍್ಯಾಕರೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೇಮಂತ, ಅಶೋಕ ಶೆಂಬೆಳ್ಳಿ, ಸುರೇಶ ಮರ್ತುಳೆ, ಅನಿಲ ಮೇತ್ರೆ, ನಿತಿನ ಮೂಲಗೆ, ಪಲ್ಲವಿ, ಗೋಪಿ, ಆಶಾ, ಗೌತಮ, ಓಂಕಾರ ಇತರರಿದ್ದರು.