

ಅಕ್ಕಿಆಲೂರ: ಸಮಯಕ್ಕೆ ಸರಿಯಾಗಿ ಬಸ್ ಬಾರದ ಹಿನ್ನಲೆಯಲ್ಲಿ ಸಮೀಪದ ಕಲಕೇರಿ ಗ್ರಾಮದಲ್ಲಿ ಸೋಮವಾರ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ಮಾಡಿದರು. ಇಡೀ ದಿನ ಬಸ್ ನಿಂತಲ್ಲೆ ನಿಂತರೂ ಸ್ಥಳಕ್ಕೆ ಅಧಿಕಾರಿಗಳು ಆಗಮಿಸದಿರುವುದು ಸಾರ್ವಜನಿಕರ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿತು.
ಹಾವೇರಿಯಿಂದ ಸಂಗೂರ, ಕುಸನೂರ ಮಾರ್ಗವಾಗಿ ತಿಳವಳ್ಳಿಗೆ ಸಂಚರಿಸುವ ಬಸ್ ಬೆಳಗ್ಗೆ 11 ಗಂಟೆ ನಂತರ ಆಗಮಿಸುವ ಹಿನ್ನಲೆಯಲ್ಲಿ ಸಮಯಕ್ಕೆ ಸರಿಯಾಗಿ ಶಾಲೆಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ಕಲಕೇರಿ ಗ್ರಾಮದ ವಿದ್ಯಾರ್ಥಿಗಳು ಬಸ್ ಎದುರು ಕುಳಿತು ಪ್ರತಿಭಟನೆ ನಡೆಸಿದರು.
ಬೆಳಗ್ಗೆ 9.30ಕ್ಕೆ ಶಾಲೆಗೆ ತೆರಳಬೇಕು. ಆದರೆ, ಬಸ್ ಬೆಳಗ್ಗೆ 11 ಗಂಟೆ ನಂತರ ಆಗಮಿಸುತ್ತದೆ. ಇದರಿಂದ ಕುಸನೂರ ಗ್ರಾಮದ ವಿವಿಧ ಶಾಲೆಗಳಿಗೆ ತೆರಳುವ ಹೇರೂರ, ಕಲಕೇರಿ, ತಾವರಗೊಪ್ಪ, ಕಲಕೇರಿ ತಾಂಡಾದ 80ಕ್ಕೂ ಹೆಚ್ಚು ವಿದ್ಯಾಥಿಗಳಿಗೆ ತೊಂದರೆಯಾಗುತ್ತಿದೆ. ಸುತ್ತಲಿನ ನೂರಾರು ವಿದ್ಯಾರ್ಥಿಗಳು ಕುನಸೂರ ಗ್ರಾಮಕ್ಕೆ ತೆರಳುತ್ತಾರೆ. ಬಸ್ ತಡವಾಗಿ ಬರುವುದರಿಂದ ಕೆಲವು ಬಾರಿ ಮಳೆಯಲ್ಲಿ ನೆನೆದು ನಿಲ್ಲುವ ಪರಿಸ್ಥಿತಿ ನಿಮಾಣವಾಗಿದೆ. ಈ ಕುರಿತು ಅನೇಕ ಬಾರಿ ಹಾನಗಲ್ಲ ಬಸ್ ಡಿಪೋ ಅಧಿಕಾರಿಗಳಿಗೆ ತಿಳಿಸಿದರೂ ಕೇವಲ ಹಾರಿಕೆ ಉತ್ತರ ದೊರೆಯುತ್ತಿದೆ ಎಂದು ತಾವರಗೊಪ್ಪದ ಮುಖಂಡ ಮೋಹನ ಕೋಟಿ ಆರೋಪಿಸಿದರು.
ಇಡೀ ದಿನ ನಿಂತ ಬಸ್: ಬಸ್ ತಡೆದು ಪ್ರತಿಭಟನೆ ಮಾಡಿದರೂ, ಅಧಿಕಾರಿಗಳು ಸ್ಥಳಕ್ಕೆ ಆಗಮಿಸಲಿಲ್ಲ. ಇಡೀ ದಿನ ವಿದ್ಯಾರ್ಥಿಗಳು ಬಸ್ ಎದುರೆ ಪ್ರತಿಭಟನೆ ಮಾಡಿದರು. ಚಾಲಕ ಮತ್ತು ನಿರ್ವಾಹಕ ಬಸ್ ಬಿಟ್ಟು ಕೆಳಗಿಳಿದು ಒಂದು ಕಡೆ ಕುಳಿತುಕೊಂಡರು. ಡಿಪೋ ಮ್ಯಾನೇಜರ್ ಮಾತ್ರ ಪ್ರತಿಭಟನಾಕಾರರನ್ನು ದೂರವಾಣಿ ಮೂಲಕ ಸಂರ್ಪಸುವ ಪ್ರಯತ್ನ ಮಾಡಿದರೆ ಹೊರತು ಸ್ಥಳಕ್ಕೆ ಆಗಮಿಸಲಿಲ್ಲ.
ಸಂಜೆ ವೇಳೆಗೆ ಸ್ಥಳಕ್ಕೆ ಆಗಮಿಸಿದ ಹಾನಗಲ್ಲ ಸಂಚಾರಿ ಸಹಾಯಕ ನಿರೀಕ್ಷಕರಾದ ಕೆ.ಎಂ. ಲಮಾಣಿ, ಎ.ಬಿ. ಹಿರೇಮಠ ಪ್ರತಿಭಟನಾಕಾರರ ಮನವೊಲಿಸಿ, ಇನ್ನುಮುಂದೆ ಸಮಯಕ್ಕೆ ಸರಿಯಾಗಿ ಬಸ್ ಬರಲಿದೆ ಎಂದು ಭರವಸೆ ನೀಡಿದರು. ನಂತರ ಬಸ್ ಸಂಚಾರ ಆರಂಭವಾಯಿತು.