

ಮೈಸೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಇದ್ದ ‘ಜೀರೋ ಪೇಮೆಂಟ್’ ವ್ಯವಸ್ಥೆ ತೆಗೆದು ಹಾಕಿ ಶುಲ್ಕ ನಿಗದಿ ಪಡಿಸಿರುವುದನ್ನು ವಿರೋಧಿಸಿ ಎಐಡಿಎಸ್‌ಒ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮಂಗಳವಾರ ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್ ಭವನದ ಎದುರು ಪ್ರತಿಭಟನೆ ನಡೆಸಿದರು.
ಮಹಾರಾಣಿ ಕಾಲೇಜಿನಲ್ಲಿ ಜೀರೋ ಪೇಮೆಂಟ್ ತೆಗೆದು ಹಾಕಿರುವ ವಿಚಾರವನ್ನು ಮೈಸೂರು ವಿಶ್ವವಿದ್ಯಾಲಯ ಕುಲಪತಿ ಅವರ ಗಮನಕ್ಕೆ ತಂದ ಸಂದರ್ಭ ‘ನಮಗೂ ಮಹಾರಾಣಿ ಕಾಲೇಜಿಗೂ ಯಾವುದೇ ಸಂಬಂಧವಿಲ್ಲ, ಮಹಾರಾಣಿ ಕಾಲೇಜು ಸರ್ಕಾರದ ಕೆಳಗೆ ಬರುತ್ತದೆ’ ಎಂದು ಸ್ಪಷ್ಟನೆ ನೀಡಿದರು. ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರೊಂದಿಗೆ ಮಾತನಾಡಿದ ಸಂದರ್ಭ ‘ಮಹಾರಾಣಿ ಕಾಲೇಜು ಮೈಸೂರು ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ್ದು’ ಎಂದು ಸ್ಪಷ್ಟನೆ ನೀಡಿದ್ದಾರೆ. ವಿಶ್ವವಿದ್ಯಾಲಯದ ಮತ್ತು ಜಂಟಿ ನಿರ್ದೇಶಕರ ನಿರ್ಲಕ್ಷೃ ಧೊರಣೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ನಿತಿನ್ ಆಕ್ರೋಶ ವ್ಯಕ್ತಪಡಿಸಿದರು.
ಪರೀಕ್ಷೆಗೆ ಇನ್ನು 20 ದಿನಗಳು ಬಾಕಿ ಇದ್ದರೂ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಪ್ರತಿನಿಧಿ ವಿಶ್ವವಿದ್ಯಾನಿಲಯಕ್ಕೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ವರ್ಷದವರೆಗೂ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸುತ್ತಿರಲಿಲ್ಲ, ಜೀರೋ ಪೇಮೆಂಟ್ ಇರುತ್ತಿತ್ತು. ಆದರೆ ಈ ವರ್ಷ ಏಕಾಏಕಿ ವಿದ್ಯಾರ್ಥಿಗಳಿಗೆ 1700 ರಿಂದ 2000 ವರೆಗೆ ಪರೀಕ್ಷಾ ಶುಲ್ಕ ಪಾವತಿಸುವಂತೆ ಒತ್ತಾಯಿಸುತ್ತಿದ್ದಾರೆ. ಇದರ ಜತೆಗೆ ಓಬಿಸಿ ಹಾಗೂ ಇತರೆ ವರ್ಗದ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕವು ಹಿಂದಿನ ವರ್ಷಕ್ಕಿಂತ ಈ ವರ್ಷ ಹೆಚ್ಚು ಮಾಡಿದ್ದಾರೆ. ಇದರ ವಿರುದ್ಧ ಮಹಾರಾಣಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಎರಡು ಬಾರಿ ಪ್ರತಿಭಟನೆ ಮಾಡಿದರೂ ನ್ಯಾಯ ದೊರೆತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಹುಪಾಲು ವಿದ್ಯಾರ್ಥಿಗಳಿಗೆ ಇಲ್ಲಿಯವರೆಗೆ ಸೂಕ್ತ ಸಮಯಕ್ಕೆ ವಿದ್ಯಾರ್ಥಿ ವೇತನ ಬಂದಿಲ್ಲ. ಆದ್ದರಿಂದ ಶುಲ್ಕವನ್ನು ಕಟ್ಟಲು ಬಹಳ ಕಷ್ಟವಾಗಿದೆ. ಮಹಾರಾಣಿ ಕಾಲೇಜಿಗೆ ಸುತ್ತಮುತ್ತಲಿನ ಎಲ್ಲ ಹಳ್ಳಿಯ ಬಡ ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಪಡೆದುಕೊಳ್ಳಲು ಬರುತ್ತಾರೆ, ಆದರೆ ಸರ್ಕಾರ ಮತ್ತು ಮೈಸೂರು ವಿಶ್ವವಿದ್ಯಾನಿಲಯ ತನ್ನ ವ್ಯಾಪಾರಿ ಧೋರಣೆಯಿಂದ ವಿದ್ಯಾರ್ಥಿಗಳಿಂದ ಸುಲಿಗೆ ಮಾಡಲು ಪ್ರಯತ್ನಿಸುತ್ತಿದೆ. ಆದ್ದರಿಂದ ಈ ಕೂಡಲೇ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಜೀರೋ ಪೇಮೆಂಟ್ ವ್ಯವಸ್ಥೆ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಐಡಿಎಸ್‌ಒ ಪದಾಧಿಕಾರಿಗಳಾದ ಸ್ವಾತಿ, ಅಂಜಲಿ, ಅಭಿಷೇಕ್, ವಿದ್ಯಾರ್ಥಿಗಳಾದ ಸಿಂಚನಾ, ರಂಜಿತಾ, ಚಂದನಾ, ನಿಖಿತಾ, ರಕ್ಷಿತಾ ಹಾಗೂ ಇತರರು ಪಾಲ್ಗೊಂಡಿದ್ದರು.