ಮೈಸೂರು ವಿಶ್ವ ವಿದ್ಯಾಲಯ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

Students protest against Mysore University
Published on

ಮೈಸೂರು: ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳು ಪ್ರವೇಶ ಶುಲ್ಕ ಪಾವತಿಸಬೇಕು ಎಂದು ಮೈಸೂರು ವಿಶ್ವವಿದ್ಯಾಲಯ ಹೊರಡಿಸಿರುವ ಆದೇಶ ವಿರೋಧಿಸಿ ಎಐಡಿಎಸ್‌ಒ ಸಂಘಟನೆ ನೇತೃತ್ವದಲ್ಲಿ ಮಹಾರಾಣಿ ಪದವಿ ವಿದ್ಯಾರ್ಥಿಗಳು ಕ್ರಾಫರ್ಡ್ ಭವನ ಮುಂಭಾಗ ಪ್ರತಿಭಟನೆ ನಡೆಸಿದರು.

ಕಳೆದ ವರ್ಷದವರೆಗೂ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸುತ್ತಿರಲಿಲ್ಲ. ಆದರೆ ಈ ವರ್ಷ ಏಕಾಏಕಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ಪಾವತಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಬಹುಪಾಲು ವಿದ್ಯಾರ್ಥಿಗಳಿಗೆ ಇಲ್ಲಿಯವರೆಗೆ ಸೂಕ್ತ ಸಮಯಕ್ಕೆ ವಿದ್ಯಾರ್ಥಿ ವೇತನ ಬಂದಿಲ್ಲ. ಹೀಗಾಗಿ ಶುಲ್ಕ ಕಟ್ಟಲು ಬಹಳ ಕಷ್ಟವಾಗಿದೆ. ಮಹಾರಾಣಿ ಕಾಲೇಜಿಗೆ ಸುತ್ತಮುತ್ತಲಿನ ಎಲ್ಲ ಹಳ್ಳಿಯ ಬಡ ವಿದ್ಯಾರ್ಥಿನಿಯರು ಬರುತ್ತಾರೆ. ಆದರೆ, ಸರ್ಕಾರ ಮತ್ತು ಮೈಸೂರು ವಿಶ್ವವಿದ್ಯಾನಿಲಯ ತನ್ನ ವ್ಯಾಪಾರಿ ಧೋರಣೆಯಿಂದ ವಿದ್ಯಾರ್ಥಿಗಳಿಂದ ಸುಲಿಗೆ ಮಾಡಲು ಪ್ರಯತ್ನಿಸುತ್ತಿದೆ ಎಂದು ವಿದ್ಯಾರ್ಥಿಗಳು ಕಿಡಿ ಕಾರಿದರು.

ಯಾವುದೇ ಕಾಲಾವಕಾಶ ಕೊಡದೆ ದಿಢೀರನೆ ಪರೀಕ್ಷಾ ಶುಲ್ಕ ಕಟ್ಟಲು ತಿಳಿಸಿದ್ದಾರೆ. ಇದು ವಿದ್ಯಾರ್ಥಿಗಳ ಮೇಲೆ ಒತ್ತಡ ಉಂಟು ಮಾಡಿದೆ. ಹೀಗಾಗಿ ಕೂಡಲೇ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಬೇಕು. ಬಡ ವಿದ್ಯಾರ್ಥಿಗಳಿಂದ ಶಿಕ್ಷಣ ಕಸಿದುಕೊಳ್ಳುವ ಈ ಧೋರಣೆ ಕೈಬಿಡಬೇಕು ಎಂದು ಆಗ್ರಹಿಸಲಾಯಿತು. ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷೆ ಚಂದ್ರಕಲಾ, ಪದಾಧಿಕಾರಿಗಳಾದ ನಿತಿನ್, ಸ್ವಾತಿ, ಹೇಮ, ಚಂದ್ರಿಕಾ, ಅಂಜಲಿ, ಅಭಿಷೇಕ್,ಸಿಂಚನ, ರಂಜಿತ, ಚಂದನ, ನಿಕಿತ, ರಕ್ಷಿತ ಹಾಗೂ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net