ವಿದ್ಯಾರ್ಥಿಗಳಿಗೆ ಶ್ರೀಕೃಷ್ಣನ ಚರಿತ್ರೆ ಅಭ್ಯಾಸ ಅಗತ್ಯ

16M.D.R.12
ಮದ್ದೂರಿನ ಗ್ಲೋಬಲ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಮಮತಾ ಶಂಕರೇಗೌಡ ಚಾಲನೆ ನೀಡಿದರು. ಚೈತ್ರಾ ಶಶಿಧರಗೌಡ, ಶಿವನಂಜಯ್ಯ, ಬಿ.ಸಿ.ಸರ್ವಮಂಗಳಾ, ಸಂತೋಷ್‌ಗೌಡ, ಎ.ವಿ.ಪಾವನಾ, ಕಲ್ಪಿತಾ ಂತೋಷ್‌ಗೌಡ ಇದ್ದರು.
Published on

 ಮದ್ದೂರು: ವಿದ್ಯಾರ್ಥಿ ಜೀವನದಿಂದಲೇ ಸಂಸ್ಕಾರದೊಟ್ಟಿಗೆ ಕಲೆ, ಸಂಸ್ಕೃತಿ ಮತ್ತಿತರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ನೆಲದ ಜಾನಪದ ಇನ್ನಿತರ ಕ್ಷೇತ್ರಗಳ ಅರಿವು ಮೈಗೂಡಿಸಿಕೊಳ್ಳಬೇಕೆಂದು ಸಮಾಜ ಸೇವಕಿ ಚೈತ್ರಾ ಶಶಿಧರಗೌಡ ಅಭಿಪ್ರಾಯಪಟ್ಟರು.

ಪಟ್ಟಣದ ಶ್ರೀ ಸರ್ವಶಿವ ಎಜುಕೇಷನಲ್ ಟ್ರಸ್ಟ್‌ನ ಗ್ಲೋಬಲ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶ್ರೀಕೃಷ್ಣ ಕೇವಲ ವ್ಯಕ್ತಿಯಲ್ಲ, ಅವರೊಂದು ಶಕ್ತಿ ಎಂದು ಬಣ್ಣಿಸಿದ ಅವರು ದ್ವಾಪರಯುಗದ ಶ್ರೀಕೃಷ್ಣನ ಚರಿತ್ರೆಯ ಅಭ್ಯಾಸ ತುಂಬ ಅವಶ್ಯವಿದ್ದು ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಲೇಬೇಕಾದ ತತ್ವ, ಸಿದ್ಧಾಂತಗಳು ಈ ವ್ಯಕ್ತಿತ್ವದಲ್ಲಿ ಅಡಕವಾಗಿರುವುದಾಗಿ ಹೇಳಿದರು.

ತಾಲೂಕು ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಮಮತಾ ಶಂಕರೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳು ಶಾಲೆಯಲ್ಲಿ ಶೇ.80ರಷ್ಟು ಅಭ್ಯಾಸ ಮತ್ತು ಇನ್ನಿತರ ಕಲಿಕೆಗಳಿಗೆ ಅವಕಾಶವಿದ್ದು ಉಳಿದ 20 ಅಂಶವಷ್ಟೇ ಪಾಲಕರ ಪಾತ್ರವಿರುತ್ತದೆ ಎಂದು ಅಭಿಪ್ರಾಯಪಟ್ಟರು.

ಪ್ರತಿಯೊಬ್ಬ ಶಿಕ್ಷಕರೂ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪಠ್ಯಕ್ರಮದೊಟ್ಟಿಗೆ ಪಠ್ಯೇತರ ಚಟುವಟಿಕೆಗಳನ್ನು ಕಲಿಸುವ ಮೂಲಕ ಮಕ್ಕಳ ಮನಸ್ಥಿತಿಯನ್ನು ಎಲ್ಲ ಸ್ಥಿತಿಗೂ ಒಗ್ಗುವಿಕೆಗೆ ಒಳಪಡಿಸುವಂತೆ ಮನವಿ ಮಾಡಿದರು.

ಆಕರ್ಷಕ ನೃತ್ಯ ಪ್ರದರ್ಶನ:

ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿವಿಧ ವೇಷಭೂಷಣಗಳಲ್ಲಿ ಸಿಂಗರಿಸಿಕೊಂಡು ಬಂದಿದ್ದ ಮಕ್ಕಳು ರಾಧೆ, ಕೃಷ್ಣ, ರುಕ್ಮಿಣಿ, ಕುಚೇಲ ಮತ್ತಿತರ ವೇಷಗಳಲ್ಲಿ ತಮ್ಮ ಪ್ರತಿಭೆ ಅನಾವರಣಗೊಳಿಸುವ ಜತೆಗೆ ವಿದ್ಯಾರ್ಥಿಗಳು ನಡೆಸಿಕೊಟ್ಟ ಆಕರ್ಷಕ ನೃತ್ಯ ಪ್ರದರ್ಶನಗಳು ಗಮನಸೆಳೆದವು. ಸಂಸ್ಥೆ ಅಧ್ಯಕ್ಷ ಶಿವನಂಜಯ್ಯ, ನಿರ್ದೇಶಕಿ ಬಿ.ಸಿ.ಸರ್ವಮಂಗಳಾ, ಸಿಇಒ ಎಂ.ಎಸ್.ಸಂತೋಷ್‌ಗೌಡ, ಮುಖ್ಯ ಶಿಕ್ಷಕ್ಷರಾದ ಎ.ವಿ.ಪಾವನಾ, ಕಲ್ಪಿತಾ ಸಂತೋಷ್‌ಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net