

ಮೈಸೂರು: ಕಾಲೇಜುಗಳಲ್ಲಿ ಕೌಶಲಾಭಿವೃದ್ಧಿ ತರಬೇತಿಗೆ ಹೆಚ್ಚಿನ ಒತ್ತು ನೀಡುವ ಅವಶ್ಯಕತೆ ಇದೆ ಎಂದು ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಕೆ.ನಾರಾಯಣಮೂರ್ತಿ ಅಭಿಪ್ರಾಯಪಟ್ಟರು.
ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಗುರುವಾರ ಸಾಫ್ಟ್‌ಸ್ಕಿಲ್ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಕಲಿಕೆಯೊಡನೆ ಕೌಶಲ ಎಂಬ ಯೋಜನೆಯನ್ನು ಸರ್ಕಾರ ಜಾರಿ ತಂದಿದೆ. 8 ರಿಂದ 12ನೇ ತರಗತಿ ಓದುವಾಗಲೇ ವಿದ್ಯಾರ್ಥಿಗಳ ಆಸಕ್ತಿ ಗುರುತಿಸಿ ಅವರ ಆಸಕ್ತಿಗೆ ಅನುಗುಣವಾಗಿ ತರಬೇತಿ ನೀಡಲಾಗುತ್ತಿದೆ. ವಿದ್ಯಾರ್ಹತೆಗೆ ತಕ್ಕ ಉದ್ಯೋಗ ದೊರೆಯದೆ ಇದ್ದರೂ ವಿದ್ಯಾರ್ಥಿಗಳು ತಾವು ಪಡೆದ ಕೌಶಲ ತರಬೇತಿಗೆ ಅನುಗುಣವಾಗಿ ಉದ್ಯೋಗ ಪಡೆಯುವ ಅವಕಾಶ ದೊರೆಯಲಿದೆ. ಹಾಗಾಗಿ ವಿದ್ಯಾರ್ಥಿಗಳು ಸರ್ಕಾರದ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಹಿಂದೆ ಉದ್ಯೋಗಕ್ಕಾಗಿ ಉದ್ಯೋಗ ನೋಂದಣಾಧಿಕಾರಿ ಕಚೇರಿಯಲ್ಲಿ ಹೆಸರು ನೋಂದಾಯಿಸಬೇಕಾಗಿತ್ತು. ಆ ನಂತರ ವಿವಿಧ ಕಂಪನಿಗಳು ಅವರ ಬೇಡಿಕೆಗೆ ಅನುಸಾರವಾಗಿ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುತಿತ್ತು. ಆದರೆ, ಇದೀಗ ಸ್ಕಿಲ್ ಕನೆಕ್ಟ್ ಪೋರ್ಟಲ್ ಅನ್ನು ಸರ್ಕಾರ ತೆರೆದಿದ್ದು, ಈ ಪೋರ್ಟಲ್‌ನಲ್ಲಿ 10 ರಿಂದ 12 ಸಾವಿರ ಕಾರ್ಖಾನೆಗಳು ನೋಂದಣಿಯಾಗಿವೆ. ವಿದ್ಯಾರ್ಥಿಗಳು ಈ ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿಕೊಂಡರೆ ಉದ್ಯೋಗ ಪಡೆಯಲು ಸಹಕಾರಿಯಾಗುತ್ತದೆ ಎಂದರು.
ಕೇವಲ ವಿದ್ಯಾವಂತರಿಗೆ ಮಾತ್ರವಲ್ಲ ಅನಕ್ಷರಸ್ಥರನ್ನು ಸಹ ಸಮಾಜದಲ್ಲಿ ಮುಂದೆ ತರಲು ಸರ್ಕಾರ ವಿವಿಧ ಯೋಜನೆಗಳನ್ನು ರೂಪಿಸಿದೆ. ಪಿಎಂ ಸ್ವನಿಧಿ ಯೋಜನೆಯಡಿ ಆಧಾರ್ ಕಾರ್ಡ್ ಇದ್ದರೆ 10 ಸಾವಿರ ರೂ.ವರೆಗೆ ಸಾಲ ಸೌಲಭ್ಯ ದೊರೆಯುತ್ತದೆ. ಈ ಹಣ ಬಳಸಿಕೊಂಡು ವ್ಯಾಪಾರ ವಹಿವಾಟು ಪ್ರಾರಂಭಿಸಿದರೆ ಸಾಲದ ಮೊತ್ತವನ್ನು ಸಹ ಹಂತ ಹಂತವಾಗಿ ಏರಿಕೆ ಮಾಡಲಾಗುವುದು ಎಂದು ಹೇಳಿದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಆರ್. ಮೂಗೇಶಪ್ಪ ಮಾತನಾಡಿ, ವಿದ್ಯಾರ್ಥಿಗಳು ಯಾವುದಾದರು ಒಂದು ಕ್ಷೇತ್ರದಲ್ಲಿ ಸಾಧನೆ ತೋರಲು ಕನಸುಗಳನ್ನು ಕಾಣಬೇಕು. ಆ ಕನಸುಗಳನ್ನು ಸಾಕಾರಗೊಳಿಸಲು ಅಗತ್ಯ ತಯಾರಿ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು. ಪ್ರಾಂಶುಪಾಲೆ ಡಾ.ಎಂ.ಪೂರ್ಣಿಮಾ, ಅಕಾಡೆಮಿಕ್ ಡೀನ್ ಡಾ.ರೇಚಣ್ಣ ಇದ್ದರು.