

ಮೈಸೂರು: ವಿದ್ಯಾರ್ಥಿಗಳು ವಿದ್ಯೆಯ ಜತೆಗೆ ವಿನಯ ರೂಢಿಸಿಕೊಳ್ಳಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಪಿ.ನಾಗಮ್ಮ ಹೇಳಿದರು.
ನಟರಾಜ ಮಹಿಳಾ ಪದವಿ ಪೂರ್ವ ಕಾಲೇಜು, ಶರಣಜ್ಯೋತಿ ಪ್ರಸಾರಾಂಗದ ವತಿಯಿಂದ ನಗರದ ನಟರಾಜ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಮಾರ್ಗದಲ್ಲಿ ಮುನ್ನಡೆಯಬೇಕು. ಇದಕ್ಕೆ ಬಸವಣ್ಣ ಅವರ ವಚನಗಳನ್ನು ಓದಬೇಕು. ಕೆಟ್ಟ ಆಲೋಚನೆಗ ಳಿಂದ ದೂರವಿರಿ. ಸದಾ ಒಳ್ಳೆಯವರ ಸ್ನೇಹ ಮಾಡಿ ಎಂದು ಸಲಹೆ ನೀಡಿದರು.
ಈ ಹಿಂದೆ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತಿರಲಿಲ್ಲ. ಆದರೆ, ಪ್ರಸ್ತುತ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಸಾಧನೆ ತೋರುತ್ತಿದ್ದಾರೆ. ಮಹಿಳೆಯರಿಗೆ ಸಾಧನೆಗೆ ಸಾಕಷ್ಟು ಅವಕಾಶಗಳು ಇದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಲೇಖಕ ಎಲ್.ಶಿವಲಿಂಗಪ್ಪ ರಚನೆಯ ‘ಬಸವಣ್ಣ ದಿ ಶರಣಾಸ್ ಆಫ್ ಕನ್ನಡ ಕಂಟ್ರಿ’ ಕೃತಿ ಬಿಡುಗಡೆ ಮಾಡಿದ ಚಾಮರಾಜನಗರ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಂ.ಆರ್. ಗಂಗಾಧರ್ ಮಾತನಾಡಿ, ಹೆಣ್ಣು ಮಕ್ಕಳು ಶಿಕ್ಷಣ ಪಡೆದರೆ ಆ ಕುಟುಂಬದ ನಿರ್ವಹಣೆ ಮತ್ತು ಏಳಿಗೆಗೆ ಸಹಕಾರಿಯಾಗುತ್ತದೆ. ಕೇವಲ ಕುಟುಂಬ ಮಾತ್ರವಲ್ಲ ದೇಶದ ಅಭಿವೃದ್ಧಿಯಲ್ಲೂ ಮಹಿಳಾ ಶಿಕ್ಷಣ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಎಂದರು.
2022-2023ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಕಾಲೇಜಿನ ಕಲಾ ವಿಭಾಗದ ರಕ್ಷಿತಾ (532), ಕವಿತಾ (532), ವಾಣಿಜ್ಯ ವಿಭಾಗದ ಜಯಲಕ್ಷ್ಮಿ (576), ಕೀರ್ತಿ (572), ಸೋನು ( 566), ನಿಶಾ ( 559) ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ, ನಟರಾಜ ಪ್ರತಿಷ್ಠಾನದ ಪ್ರೊ.ಎಸ್.ಶಿವರಾಜಪ್ಪ, ಶೇಷಾದ್ರಿಪುರಂ ಕಾಲೇಜಿನ ಪ್ರಾಂಶುಪಾಲರಾದ ಕೆ.ಸೌಮ್ಯ ಈರಪ್ಪ, ಲೇಖಕ ಎಲ್.ಶಿವಲಿಂಗಪ್ಪ, ಪ್ರಾಂಶುಪಾಲರಾದ ಸುನೀತಾ ರಾಣಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಚಂದ್ರಶೇಖರ್ ಹಾಗೂ ಇತರರು ಇದ್ದರು.