ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ಅಗತ್ಯ

4ss1swamiji udgatane
ಕೊಡ್ಲಿಪೇಟೆ ಎಸ್‌ಕೆಎಸ್ ವಿದ್ಯಾಸಂಸ್ಥೆಯಲ್ಲಿ ನಡೆದ ಸ್ವಾಸ್ಥೃ ಸಂಕಲ್ಪ ಕಾರ್ಯಕ್ರಮವನ್ನು ಕಲ್ಲುಮಠದ ಮಹಾಂತ ಸ್ವಾಮೀಜಿ ಉದ್ಘಾಟಿಸಿದರು. ಭಗವಾನ್, ಜಯಕುಮಾರ್, ನಾಗರಾಜ್ ಇದ್ದರು.
Published on

 ಶನಿವಾರಸಂತೆ: ಸ್ವಾಸ್ಥೃ ಸಮಾಜ ನಿರ್ಮಾಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯ ಅನುಕರಣೀಯ ಎಂದು ಕೊಡ್ಲಿಪೇಟೆ ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ ನುಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸೋಮವಾರಪೇಟೆ ಬಿ.ಸಿ. ಟ್ರಸ್ಟ್ ತಾಲೂಕು ಮತ್ತು ಕೊಡ್ಲಿಪೇಟೆ ವಲಯ ಸಹಯೋಗದಲ್ಲಿ ಕೊಡ್ಲಿಪೇಟೆ ಕಲ್ಲು ಮಠದ ಎಸ್.ಕೆ.ಎಸ್. ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಸ್ವಾಸ್ಥೃ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಭವಿಷ್ಯದಲ್ಲಿ ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣದ ಅಗತ್ಯ ಇರುತ್ತದೆ. ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಜನಜಾಗೃತಿ ವೇದಿಕೆ ಮೂಲಕ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಅನುಕರಣೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಕ್ಕಳು ಉತ್ತಮ ಸಂಸ್ಕಾರದೊಂದಿಗೆ ಗುರು-ಹಿರಿಯರಿಗೆ ಗೌರವ ಕೊಡುವ ಗುಣ ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಇದೇ ವೇಳೆ ಕಿವಿಮಾತು ಹೇಳಿದರು.

ಸಂಪನ್ಮೂಲ ವ್ಯಕ್ತಿ ಶನಿವಾರಸಂತೆ ವಿಘ್ನೇಶ್ವರ ಬಾಲಕಿಯರ ಪ್ರೌಢ ಶಾಲಾ ಸಹಶಿಕ್ಷಕ ಕೆ.ಪಿ.ಜಯಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಮಾನಸಿಕ ಮತ್ತು ದೈಹಿಕ ಆರೋಗ್ಯ ಉತ್ತಮವಾಗಿಬೇಕಾದರೆ ದುಶ್ಚಟಗಳಿಂದ ದೂರ ಇರಬೇಕು. ಧೂಮಪಾನ, ಮದ್ಯಪಾನ, ಅಮಲು ಪದಾರ್ಥಗಳ ಸೇವನೆ ಮುಂತಾದ ದುರಭ್ಯಾಸಗಳಿಂದ ದೂರ ಇರಬೇಕು. ದುಶ್ಚಟಗಳಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಲ್ಲದೆ, ಜೀವನವೇ ನಾಶವಾಗುತ್ತದೆ ಎಂದು ಎಚ್ಚರಿಸಿದರು. ವಿದ್ಯಾರ್ಥಿಗಳು ಪಠ್ಯ, ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವುದು, ಆದರ್ಶ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳುವುದು, ರಾಷ್ಟ್ರಪ್ರೇಮ ಬೆಳೆಸಿಕೊಳ್ಳುವುದು ಇನ್ನು ಮುಂತಾದ ಸಕರಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳುವುದರಿಂದ ಭವಿಷ್ಯದಲ್ಲಿ ಉತ್ತಮ ವ್ಯಕ್ತಿಯಾಗಲು ಸಾಧ್ಯ ಎಂದರು.

ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಭಗವಾನ್ ಮಾತನಾಡಿ, ಜನ ಜಾಗೃತಿ ವೇದಿಕೆಯು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜತೆಗೂಡಿ ವಿದ್ಯಾರ್ಥಿಗಳು ಮತ್ತು ಯುವಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ಸ್ವಾಸ್ಥೃ ಸಂಕಲ್ಪ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ. ಈ ಮೂಲಕ ಸ್ವಾಸ್ಥ ಸಮಾಜ ನಿರ್ಮಾಣ ಮಾಡಲು ಪ್ರಯತ್ನಿಸುತ್ತಿದೆ ಎಂದರು.

ಕಾರ್ಯಕ್ರಮದ ಕುರಿತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ವಲಯಾಧಿಕಾರಿ ನಾಗರಾಜ್ ಪ್ರಸ್ತಾವಿಕ ನುಡಿಗಳನ್ನಾಡಿದರು. ಸೇವಾ ಪ್ರತಿನಿಧಿ ಕವಿತಾ, ವಿದ್ಯಾಸಂಸ್ಥೆಯ ಶಿಕ್ಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net