

ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಇಟ್ಟುಕೊಂಡು, ಅದನ್ನು ತಲುಪಲು ಶ್ರಮಿಸಬೇಕು ಎಂದು ಮೈಸೂರು ವಿವಿ ತತ್ವಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ವಿ.ಎಸ್.ಶೇಷಗಿರಿರಾವ್ ಸಲಹೆ ನೀಡಿದರು.
ಸದ್ವಿದ್ಯಾ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಸದ್ವಿದ್ಯಾ ಶತೋತ್ತರ, ಸುವರ್ಣ, ರಜತ ಮಹೋತ್ಸವ ವರ್ಷ ಅಂಗವಾಗಿ ಸದ್ವಿದ್ಯಾ ಪ್ರೌಢಶಾಲೆಯಲ್ಲಿ ಆಯೋಜಿಸಿರುವ ನಗರ ಮಟ್ಟದ ಅಂತರ ಪ್ರೌಢಶಾಲಾ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳು ಗುರಿ ಮುಟ್ಟಲು ಸೂಕ್ತ ದಾರಿ ಆಯ್ಕೆ ಮಾಡಿಕೊಳ್ಳಬೇಕು. ಸಮಯಪ್ರಜ್ಞೆ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಗುರಿ ಇಟ್ಟುಕೊಂಡು ಶಿಕ್ಷಣದ ಜತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸದ್ವಿದ್ಯಾ ಸಂಸ್ಥೆಗೆ ಸುದೀರ್ಘ ಇತಿಹಾಸ ಇದೆ. ಸದ್ವಿದ್ಯಾ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಸಮಾಜಕ್ಕೆ ಅಪಾರ ಕೊಡುಗೆ ನೀಡಿವೆ ಎಂದರು.
ಸದ್ವಿದ್ಯಾ ಶಿಕ್ಷಣ ಸಂಸ್ಥೆಗಳ ಗೌರವ ಸಹ ಕಾರ್ಯದರ್ಶಿ ಪ್ರೊ.ಕೆ.ಎಸ್.ಹಿರಿಯಣ್ಣ ಮಾತನಾಡಿ, ಇಂತಹ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು. ಇವು ಜೀವನದ ಸ್ಪರ್ಧೆಗೂ ಸಹಕಾರಿಯಾಗಲಿವೆ. ಹಾಗಾಗಿ, ಬಹುಮಾನ ಗೆಲ್ಲುವುದಕ್ಕಿಂತಲೂ ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ ಎಂದರು.
ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಸವಾಲುಗಳನ್ನು ಎದುರಿಸಿ ಮುನ್ನುಗ್ಗಬೇಕು. ಉನ್ನತ ಹುದ್ದೆ ಅಲಂಕರಿಸುವ ಗುರಿ ಹೊಂದಬೇಕು. ಗುರು-ಹಿರಿಯರನ್ನು ಗೌರವದಿಂದ ಕಾಣಬೇಕು. ಸ್ಪರ್ಧೆಯಲ್ಲಿ ಭಾಗಿಯಾಗಿರುವ ವಿದ್ಯಾರ್ಥಿಗಳ ಮೇಲೆ ಕೃಷ್ಣನ ಹಾಗೂ ದಾಸರ ಅನುಗ್ರಹ ಇರಲಿ ಎಂದು ಆಶಿಸಿದರು. ಮುಖ್ಯಶಿಕ್ಷಕ ರಾಮಚಂದ್ರಭಟ್, ಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ ಡಾ.ನಳನಿ ಚಂದರ್ ಇತರರಿದ್ದರು.