ವಿದ್ಯಾರ್ಥಿಗಳಿಗೆ ತ್ರಿಭಾಷಾ ಸೂತ್ರ ಅಗತ್ಯ : ವಿಧಾನ ಪರಿಷತ್ ಮಾಜಿ ಉಪ ಸಭಾಪತಿ ಮರಿತಿಬ್ಬೇಗೌಡ

maritibbegowda1-
Published on

ಮೈಸೂರು: ತ್ರಿಭಾಷಾ ಸೂತ್ರವು ವಿದ್ಯಾರ್ಥಿಗಳಿಗೆ ವಿವಿಧ ಭಾಷೆಗಳಲ್ಲಿ ಪರಿಣಾಮಕಾರಿಯಾಗಿ ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ. ವಿದ್ಯಾರ್ಥಿಗಳ ಭವಿಷ್ಯದ ವೃತ್ತಿ ಮತ್ತು ಸಾಮಾಜಿಕ ಜೀವನಕ್ಕೆ ಸಹಾಯಕವಾಗಿದೆ ಎಂದು ವಿಧಾನ ಪರಿಷತ್ ಮಾಜಿ ಉಪ ಸಭಾಪತಿ ಮರಿತಿಬ್ಬೇಗೌಡ ಅಭಿಪ್ರಾಯಪಟ್ಟಿದ್ದಾರೆ.

1961ರಲ್ಲಿ ಭಾರತದ ರಾಜ್ಯಗಳ ಹಲವಾರು ಮುಖ್ಯಮಂತ್ರಿಗಳ ಸಭೆಯು ಬಹು ಭಾಷೆಗಳನ್ನು ಉತ್ತೇಜಿಸಲು ಹಾಗೂ ರಾಷ್ಟ್ರೀಯ ಏಕತೆಯ ಹಿತದೃಷ್ಟಿಯಿಂದ ಒಮ್ಮತದಿಂದ ತ್ರಿಭಾಷಾ ಸೂತ್ರವನ್ನು ಜಾರಿಗೆ ತರಲಾಗಿದೆ. ನಮ್ಮ ದೇಶದಲ್ಲಿ ಬಹು ಭಾಷಾ ಪಂಡಿತರ ಸಂಖ್ಯೆ ಹೆಚ್ಚಾಗಿದೆ ಮತ್ತು ದೇಶಕ್ಕೆ, ಅವರ ಕೊಡುಗೆಯು ಅಪಾರವಾಗಿದೆ. ಉದಾಹರಣೆಗೆ ನಮ್ಮ ದೇಶದ ಪ್ರಧಾನಮಂತ್ರಿಗಳಾಗಿದ್ದ ಹಾಗೂ ಬಹು ಭಾಷಾ ಪಂಡಿತರಾದ ಪಿ.ವಿ.ನರಸಿಂಹರಾವುವರು ಸುಮಾರು 17 ಭಾಷೆಗಳನ್ನು ಮಾತನಾಡುತ್ತಿದ್ದರು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಶಿಕ್ಷಣದ ಎಲ್ಲ ಅಂಶಗಳನ್ನು ಮಗುವು ಭಾಷೆಯ ಮೂಲಕವೇ ಅರ್ಥಮಾಡಿಕೊಳ್ಳುತ್ತದೆ. ಇದು ಬಹು ಭಾಷಾ ಸಮಾಜವನ್ನು ಬೆಳೆಸಲು ಸಹಾಯ ಮಾಡುತ್ತದೆ. ಗಣಿತ, ವಿಜ್ಞಾನ ಅಥವಾ ಇನ್ನಾವುದೇ ವಿಷಯಗಳ ಬಗ್ಗೆ ತಿಳುವಳಿಕೆ ಪಡೆಯಲು ಭಾಷೆ ಅತ್ಯಗತ್ಯ. ತ್ರಿಭಾಷಾ ಸೂತ್ರವು ಭ್ರಾತೃತ್ವವನ್ನು ಹಾಗೂ ಭಾಷಾ ವೈವಿಧ್ಯತೆಯನ್ನು ಗೌರವಿಸುತ್ತದೆ ಮತ್ತು ಸಂರಕ್ಷಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿವಿಧ ಭಾಷೆಗಳನ್ನು ಕಲಿಯುವುದರಿಂದ, ವಿದ್ಯಾರ್ಥಿಗಳ ಭೌದ್ಧಿಕ ಮಟ್ಟ ಸುಧಾರಿಸುತ್ತದೆ. ಉನ್ನತ ಶಿಕ್ಷಣ ಮತ್ತು ಉದ್ಯೋಗಾವಕಾಶ ಗಳಿಗೆ ಹೆಚ್ಚಿನ ಪ್ರವೇಶವನ್ನು ಪಡೆಯುತ್ತಾರೆ. ವಿವಿಧ ಸಂಸ್ಕೃತಿಗಳ ವರಿಚಯದ ಜತೆಗೆ ಸಾಂಸ್ಕೃತಿಕ ವಿನಿಮ ಉತ್ತೇಜಿಸುತ್ತದೆ. ತ್ರಿಭಾಷಾ ಸೂತ್ರವು ರಾಜ್ಯಗಳ ನಡುವೆ ಭಾಷಾ ಸಂಬಂಧಿತ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರಾದೇಶಿಕ ಭಾಷೆಗಳ ಬಳಕೆ ಮತ್ತು ಕಲಿಕೆಯನ್ನು ಉತ್ತೇಜಿಸುವುದರಿಂದ ಭವಿಷ್ಯದ ಪೀಳಿಗೆಗೆ ಅವುಗಳನ್ನು ಸಂರಕ್ಷಿಸಲು ಸಹಾಯ ಮಾಡಬಹುದು. ಬಹು ಭಾಷೆಗಳನ್ನು ಕಲಿಯುವ ಮೂಲಕ ಅರಿವಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದ್ದಾರೆ.

64 ವರ್ಷಗಳಿಂದ ತ್ರಿಭಾಷಾ ಸೂತ್ರ ಜಾರಿಯಲ್ಲಿರುವ ಈ ನೀತಿಯನ್ನು ಭಾಷಾ ತಜ್ಞರ ಸಮಿತಿಯ ಅಭಿಪ್ರಾಯ ಪಡೆಯದೆ, ತ್ರಿಭಾಷಾ ಸೂತ್ರ ನಿರ್ಬಂಧನೆ ಮಾಡುವುದರಿಂದ ರಾಜ್ಯದಲ್ಲಿ ನೆಲಸಿರುವ ಅನ್ಯಭಾಷಿಕರು ಹಾಗೂ ಕನ್ನಡಿಗರೂ ಭಾಷೆಗಳನ್ನು ಕಲಿಯುವ ಅವಕಾಶದಿಂದ ವಂಚಿತರಾಗುತ್ತಾರೆ ಮತ್ತು ತ್ರಿಭಾಷಾ ಇರುವುದರಿಂದ ನಮ್ಮ ಮಾತೃ ಭಾಷೆಯಾದ ಕನ್ನಡ ಮಾಧ್ಯಮ ಬೆಳವಣಿಗೆಗೆ ಅಡ್ಡಿಯಾಗುವುದಿಲ್ಲ. ಆದ್ದರಿಂದ ತ್ರಿಭಾಷಾ ಸೂತ್ರವನ್ನು ಎಂದಿನಂತೆ ಮುಂದುವರೆಸಲು ಮುಖ್ಯಮಂತ್ರಿ ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net