ವಿದ್ಯಾರ್ಥಿಗಳೇ ಸ್ವಂತ ನಿರ್ಧಾರ ಕೈಗೊಳ್ಳಲಿ

24Jaggu3
ಬೆಳಗಾವಿಯ ಎಸ್.ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಡಾ.ಅಲ್ಲಮಪ್ರಭು ಸ್ವಾಮೀಜಿ ಉದ್ಘಾಟಿಸಿದರು. ನಿಲೇಶ್ ಚೌಗಲೆ, ವಿಲಾಸ ಬಾದಾಮಿ, ಎಫ್.ವಿ. ಮಾನ್ವಿ, ಇತರರಿದ್ದರು.
Published on

ಬೆಳಗಾವಿ: ಪಿಯುಸಿ ಪೂರ್ಣಗೊಳಿಸಿ, ಕಾಲೇಜು ಮೆಟ್ಟಿಲೇರುವ ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳುವುದಕ್ಕೆ ಸ್ವತಃ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಕ್ರೈಂಟೋರ್ಸ್ ಗ್ರೂಪ್ ಆಫ್ ಕಂಪನಿ ಚೇರ್ಮನ್ ನಿಲೇಶ್ ಚೌಗಲೆ ಹೇಳಿದರು.

ಶಿವಬಸವ ನಗರದ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಎಸ್.ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಮಂಗಳವಾರ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತಂದೆತಾಯಿ, ಗುರು ಹಿರಿಯರು, ಸ್ನೇಹಿತರ ಮೇಲೆ ಅವಲಂಬನೆಯಾಗದೆ ಅವರ ಸಲಹೆ-ಸೂಚನೆಗಳನ್ನು ಗೌರವಿಸುತ್ತ ಉತ್ತಮ ಅಭಿರುಚಿ ಬೆಳೆಸಿಕೊಳ್ಳುವುದರ ಜತೆಗೆ ಸ್ವತಃ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಬೆಳೆಸಿಕೊಳ್ಳಬೇಕು ಎಂದರು. ವೇತನ ಆಸೆಗೆ ಮಾತ್ರ ಇಂಜಿನಿಯರಿಂಗ್ ಆಯ್ಕೆ ಮಾಡದೆ ದೇಶದ ಅಭಿವೃದ್ಧಿಗಾಗಿ ಪರಿಶ್ರಮ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಬೇಕು ಎಂದರು. ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ, ಭವಿಷ್ಯ ರೂಪಿಸಲು ಸತತ ಪರಿಶ್ರಮ ಪಡುವ ತಂದೆ-ತಾಯಿ ಗಮನದಲ್ಲಿಟ್ಟುಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಎಸ್‌ಜಿಬಿಐಟಿ ಆಡಳಿತ ಮಂಡಳಿ ಚೇರ್ಮನ್ ಎಫ್.ವಿ.ಮಾನ್ವಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಡಾ.ಬಿ.ಆರ್.ಪಟಗುಂದಿ ಸ್ವಾಗತಿಸಿದರು. ಶಂಕರ ಇಂಜಿನಿಯರಿಂಗ್ ವರ್ಕ್ಸ್ ಮುಖ್ಯಸ್ಥ ವಿಲಾಸ ಬಾದಾಮಿ, ಮೂಲ ವಿಜ್ಞಾನ ವಿಭಾಗ ಮುಖ್ಯಸ್ಥ ಡಾ.ಅಶೋಕ ಹುಲಗಬಾಳಿ ಇತರರು ಇದ್ದರು. ಮಂಜುನಾಥ ಶರಣಪ್ಪನವರ, ಸುಷ್ಮಾ ಮುಳಗುಂದ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net