ವಿದ್ಯಾರ್ಥಿಗಳು ಸಮಯದ ಸದ್ಭಳಕೆ ಮಾಡಿಕೊಳ್ಳಿ

Prerane
Published on

ಸವಣೂರ: ವಿದ್ಯಾರ್ಥಿ ಜೀವನದಲ್ಲಿ ಕ್ರಮಬದ್ಧ ಪಾಠಕ್ಕಾಗಿ ಸಮಯವನ್ನು ಸದ್ಭಳಕೆ ಮಾಡುವ ವಿದ್ಯಾರ್ಥಿಗೆ ಪರೀಕ್ಷಾ ಭಯ ಇರುವುದಿಲ್ಲ ಎಂದು ಬಿಇಒ ಎಂ.ಎಫ್. ಬಾರ್ಕಿ ತಿಳಿಸಿದರು.

ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಹಾವೇರಿ ಎಂಆರ್‌ಎಂ ಪಿಯು ಕಾಲೇಜ್, ರಾಯಲ್ ಎಜುಕೇಷನ್ ಅಕಾಡೆಮಿ ಶಾಲೆ, ವಿಜಯವಾಣಿ ದಿನ ಪತ್ರಿಕೆ ಸಹಯೋಗದಲ್ಲಿ ಪಟ್ಟಣದ ರಾಯಲ್ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಫಲಿತಾಂಶ ಸುಧಾರಣೆಯ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ಓದುವ ಸಮಯವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಆತ್ಮವಿಶ್ವಾಸದೊಂದಿಗೆ, ಕಷ್ಟಗಳಿಗೆ ಹೆದರದೆ ಸಮಸ್ಯೆಗಳನ್ನು ನಿಭಾಯಿಸುವ ಶಕ್ತಿಯನ್ನು ಬೆಳೆಸಿಕೊಳ್ಳುವುದು ಅವಶ್ಯವಾಗಿದೆ. ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನವು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ. ಕಾರ್ಯಾಗಾರದಿಂದ ಬಹಳಷ್ಟು ಉಪಯುಕ್ತತೆಯನ್ನು ವಿದ್ಯಾರ್ಥಿಗಳು ಪಡೆಯಬಹುದಾಗಿದೆ ಎಂದರು.

ಪ್ರತಿಷ್ಠಿತ ಎಂಆರ್‌ಎಂ ವಿದ್ಯಾ ಸಂಸ್ಥೆಗಳ ಚೇರ್ಮನ್, ಸಂಪನ್ಮೂಲ ವ್ಯಕ್ತಿ ಡಾ. ರಾಮಮೋಹನ ರಾವ್ ಮಾತನಾಡಿ, ವಿದ್ಯಾರ್ಥಿಗಳು ಗುರಿ ತಲುಪಲು ದೃಢವಾದ ಸಂಕಲ್ಪ, ನಿರಂತರ ಪರಿಶ್ರಮ ಅಗತ್ಯವಾಗಿದೆ. ಜ್ಞಾಪಕ ಶಕ್ತಿಗಾಗಿ ಸುಲಭ ತಂತ್ರಗಳನ್ನು ಮಕ್ಕಳಿಗೆ ತಿಳಿಸಿ, ಪರೀಕ್ಷಾ ಪೂರ್ವ ತಯಾರಿ ಎಷ್ಟು ಮುಖ್ಯವೋ ಹಾಗೆಯೇ ಪರೀಕ್ಷಾ ಕೊಠಡಿಯಲ್ಲಿನ ಮನಸ್ಥಿತಿಯನ್ನು ಹೇಗೆ ಕಾಯ್ದುಕೊಳ್ಳಬೇಕು ಎಂಬುದರ ಕುರಿತು ಮಾರ್ಗದರ್ಶನ ನೀಡಿದರು. ಸುಲಭವಾಗಿ ಜೀರ್ಣವಾಗುವ ಆಹಾರ ಸೇವನೆ ಮತ್ತು ದಿನಕ್ಕೆ 10 ಲೋಟಗಳಷ್ಟು ನೀರು ಕುಡಿಯುವುದು ಅತ್ಯವಶ್ಯವಾಗಿದೆ. ಬಿಡುವಿನ ಸಮಯದಲ್ಲಿ ಮಾಡುವ ವ್ಯಾಯಾಮಗಳನ್ನು ವಿದ್ಯಾರ್ಥಿಗಳಿಗೆ ಮನ ಮುಟ್ಟುವಂತೆ ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ನೀಲಕಂಠ ರಬನಾಳ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆಯಲು ಮಾನಸಿಕ ಸಿದ್ಧತೆ ಅವಶ್ಯವಾಗಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠದಲ್ಲಿನ ಸಮಸ್ಯೆಗಳ ಕುರಿತು ಅರ್ಥೈಯಿಸಿದಲ್ಲಿ ಮಾತ್ರ ವಿದ್ಯಾರ್ಥಿಗಳು ಸಮಸ್ಯೆಯನ್ನು ಸುಲಭ ರೀತಿಯಲ್ಲಿ ಪರಿಹರಿಸಲು ಮುಂದಾಗುತ್ತಾರೆ. ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆಯನ್ನು ಅರ್ಥ ಮಾಡಿಕೊಂಡಲ್ಲಿ ಮಾತ್ರ ನಿಖರ ಉತ್ತರ ಸೂಕ್ತ ಸಮಯದಲ್ಲಿ ಹೊಳೆಯಲು ಸಾಧ್ಯವಾಗಿದೆ ಎಂದರು.

ಪಟ್ಟಣದ ವಿವಿಧ ಪ್ರೌಢಶಾಲೆಗಳ ಸುಮಾರು 150ಕ್ಕೂ ವಿದ್ಯಾರ್ಥಿಗಳು ಕಾರ್ಯಾಗಾರದ ಸದುಪಯೋಗ ಪಡೆದರು.

ಕಾರ್ಯಾಗಾರ ಉದ್ಘಾಟನೆ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ವಿಜಯವಾಣಿ ದಿನ ಪತ್ರಿಕೆಯ ವಿದ್ಯಾರ್ಥಿ ಮಿತ್ರ ಪತ್ರಿಕೆಗಳನ್ನು ವಿತರಿಸಲಾಯಿತು. ಸಿಆರ್‌ಸಿ ವಿಜೇಂದ್ರ ಆಚಾರಿ, ರಾಯಲ್ ಎಜ್ಯುಕೇಷನ್ ಅಕಾಡೆಮಿ ಅಧ್ಯಕ್ಷ ರಿಯಾಜ್ ಅಹ್ಮದ್ ಹಾಗೂ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ದಿನ ಪತ್ರಿಕೆ ಅತ್ಯಂತ ಕಡಿಮೆ ಬೆಲೆಯಲ್ಲಿ ವಿದ್ಯಾರ್ಥಿಗಳಿಗೆ ನಿತ್ಯ ನೀಡುತ್ತಿರುವ ವಿದ್ಯಾರ್ಥಿ ಮಿತ್ರ ಪತ್ರಿಕೆ ಬಹಳಷ್ಟು ಉಪಯುಕ್ತವಾಗಿದೆ. ಆದ್ದರಿಂದ, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಪಾಲಕರು ವಿದ್ಯಾರ್ಥಿಗಳಿಗಾಗಿ ಪತ್ರಿಕೆಯನ್ನು ತರಿಸುವ ಕೆಲಸವಾಗಲಿ. ಬಿಇಒ ಎಂ.ಎಫ್. ಬಾರ್ಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net