ವಿದ್ಯಾರ್ಥಿಗಳ ಜೀವನ ಸುಂದರ ಕಾಲಘಟ್ಟ

BLY- 30-3
ಬಳ್ಳಾರಿ ನಗರದ ವೀರಶೈವ ವಿದ್ಯಾವರ್ಧಕ ಸಂಘದ ವೀರಶೈವ ಮಹಾವಿದ್ಯಾಲಯದಲ್ಲಿ ಮಂಗಳವಾರ ನಡೆದ ‘ಪರ್ವ-2023’ ಪ್ರತಿಭಾ ದಿನಾಚರಣೆ ಕಾರ್ಯಕ್ರಮವನ್ನು ಕಮ್ಮರಚೇಡು ಸಂಸ್ಥಾನ ಮಠದ ಕಲ್ಯಾಣ ಸ್ವಾಮೀಜಿ ಉದ್ಘಾಟಿಸಿದರು.
Published on

ಬಳ್ಳಾರಿ : ವಿದ್ಯಾರ್ಥಿಗಳಲ್ಲಿ ಸುಪ್ತವಾದ ಅನೇಕ ಕಲೆಗಳು ಇರುತ್ತವೆ. ಪ್ರತಿಭಾವಂತರು ಇರುತ್ತಾರೆ. ಅವರಿಗೆ ಸೂಕ್ತವಾದ ಅವಕಾಶ ಮತ್ತು ಪ್ರೋತ್ಸಾಹ ನೀಡಿದರೆ ಉತ್ತಮ ಪ್ರತಿಭೆಗಳಾಗಿ ಬೆಳೆಯುತ್ತಾರೆ ಎಂದು ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಆರ್.ರಾಮನಗೌಡ ಹೇಳಿದರು.

ನಗರದ ವೀರಶೈವ ವಿದ್ಯಾವರ್ಧಕ ಸಂಘದ ವೀರಶೈವ ಮಹಾವಿದ್ಯಾಲಯದಲ್ಲಿ ಮಂಗಳವಾರ ನಡೆದ ‘ಪರ್ವ-2023’ ಪ್ರತಿಭಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ಬದುಕನ್ನು ಸುಂದರವಾಗಿಸಿಕೊಳ್ಳಬೇಕು. ಉತ್ತಮ ಸಮಾಜ ನಿರ್ಮಾಣ ಮಾಡುವ ವಿದ್ಯಾವಂತರನ್ನು ಕಾಲೇಜುಗಳ ಮೂಲಕ ನಾವು ನಿರ್ಮಾಣ ಮಾಡಬೇಕೆಂದು ತಿಳಿಸಿದರು.

ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್ ಮಾತನಾಡಿ, ವಿದ್ಯಾರ್ಥಿಗಳ ಜೀವನ ಸುಂದರ ಕಾಲಘಟ್ಟ. ಇಂದು ಹವಮಾನ ವೈಪರಿತ್ಯದ ದಿನಗಳಲ್ಲಿದ್ದೇವೆ. ಪರಿಸರ ಅಪಾಯ ಮೀರಿ ಕಲುಷಿತವಾಗಿದೆ. ಗಿಡ, ಮರಗಳನ್ನು ಬೆಳಸುವುದರ ಮೂಲಕ ಅರಣ್ಯವನ್ನು ಬೆಳಸಬೇಕು. ಪರಿಸರವನ್ನು ರಕ್ಷಿಸಬೇಕು. ಮಾನವನ ಸಂಪತ್ತು ಪರಿಸರ. ಅದನ್ನು ಬೆಳೆಸುವುದು ನಮ್ಮೆಲ್ಲರ ಹೊಣೆ ಎಂದು ನುಡಿದರು.

ವೀ.ವಿ.ಸಂಘದ ಕಾರ್ಯದರ್ಶಿ ಎಚ್.ಎಂ.ಗುರುಸಿದ್ಧಸ್ವಾಮಿ ಮಾತನಾಡಿ, ಸರ್ವರಿಗೂ ಶಿಕ್ಷಣ ಲಭಿಸಬೇಕು. ಈ ಭಾಗದ ಜನರು ಸರ್ವತೋಮುಖ ಅಭಿವೃದ್ಧಿಯಾಗಬೇಕು. ಅದಕ್ಕೆ ಮೂಲ ಶಿಕ್ಷಣ ಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಕಮ್ಮರಚೇಡು ಸಂಸ್ಥಾನ ಮಠದ ಕಲ್ಯಾಣ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಬೋಧಕರು ಸಾಧಿಸಿದಂತಹ ಉತ್ತಮ ಸಾಧನೆಗಳ ಅನಾವರಣವಾಗಬೇಕು. ಪ್ರತಿ ಹಂತದಲ್ಲೂ ನಾವು ವಿಕಾಸ ಹೊಂದುತ್ತಿರಬೇಕು. ವಿದ್ಯಾರ್ಥಿಗಳು ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೊಗುತ್ತಿರುವುದು ವಿಷಾದನೀಯ. ಅದರಿಂದ ದೂರ ಸರಿದು ಸುಸಂಸ್ಕೃತನಾಡನ್ನು ಕಟ್ಟುವ ಉತ್ತಮ ನಾಗರಿಕರಾಗಬೇಕು ಎಂದು ಆರ್ಶಿವಚನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ದರೂರು ಶಾಂತನಗೌಡ ಮಾತನಾಡಿ, ವಿದ್ಯಾರ್ಥಿಗಳು ಸ್ಫರ್ಧಾತ್ಮಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅದರ ಪ್ರತೀಕವಾಗಿ ಇಂದು ಪರ್ವ-2023 ಪ್ರತಿಭಾ ದಿನಾಚರಣೆಯನ್ನಾಗಿ ಅರ್ಥಪೂರ್ಣವಾಗಿ ಆಚರಿಸುತ್ತಿದ್ದೇವೆ ಎಂದು ಆಶಿಸಿದರು.

ಕೋಶಾಧಿಕಾರಿ ಗೋನಾಳ್ ರಾಜಶೇಖರ ಗೌಡ, ಕಾರ್ಯಕ್ರಮ ಕುರಿತಾಗಿ ಸದಾಶಯ ನುಡಿಗಳನ್ನಾಡಿದರು. ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ರಮೇಶ ಶಿವಾ, ಕರೇಗೌಡ, ಗಂಗಾವತಿ ವೀರೇಶ್, ಡಿ.ವಿಶ್ವನಾಥ, ಎಸ್.ವೆಂಕಟೇಶ್ ಗೌಡ, ವೀರನಗೌಡ, ಪಂಪಾಪತಿ.ಪಿ, ಸಿದ್ಮಲ್ ಮಂಜುನಾಥ, ಬಿ.ಅಮರೇಶ್ ಮತ್ತಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net