

ಯಲಬುರ್ಗಾ: ಪದವಿ ಹಂತದಲ್ಲಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿದಾಗ ಮಾತ್ರ ಅಂದುಕೊಂಡ ಗುರಿ ಸಾಧಿಸಲು ಸಾಧ್ಯ ಎಂದು ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ ಹೇಳಿದರು.
ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಶ್ರುಕವಾರ ಹಮ್ಮಿಕೊಂಡಿದ್ದ ಪದವಿಯ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ವಿವಿಧ ಘಟಕಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಅವರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಲ್ಲದೆ, ಮಕ್ಕಳ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡಿದ್ದಾರೆ. ಶೈಕ್ಷಣಿಕವಾಗಿ ಕ್ಷೇತ್ರ ಪ್ರಗತಿಯಾಗಿಸುವಲ್ಲಿ ಅವರ ಶ್ರಮ ಸಾಕಷ್ಟಿದೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿ ತಂದೆ ತಾಯಿಗಳ ಕನಸು ನನಸು ಮಾಡಬೇಕು. ಶಿಕ್ಷಣಕ್ಕಾಗಿ ಸರ್ಕಾರ ಸಾಕಷ್ಟು ಸೌಲಭ್ಯ ಒದಗಿಸುತ್ತಿದೆ. ಆ ದಿಸೆಯಲ್ಲಿ ಎಲ್ಲರೂ ಓದಿನ ಕಡೆಗೆ ಹೆಚ್ಚು ಗಮನ ಹರಿಸಬೇಕು ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸುಧೀರ ಕೊರ್ಲಹಳ್ಳಿ ಮಾತನಾಡಿ, ವಿದ್ಯಾರ್ಥಿಗಳು ಓದುವ ಹಂತದಲ್ಲಿ ನಿರಂತರ ಅಧ್ಯಯನ ಶೀಲರಾಗಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಗುರಿ ಸಾಧನೆಗೆ ಅಭ್ಯಾಸದ ಕಡೆ ಆಸಕ್ತಿ ವಹಿಸಬೇಕು. ಸಾಧಕರ ಜೀವನ ಚರಿತ್ರೆ ಓದುವುದರಿಂದ ಪ್ರೇರಣೆ ಸಿಗುತ್ತದೆ. ವಿದ್ಯಾರ್ಥಿಗಳ ಹಿತ ಕಾಪಾಡುವ ಉದ್ದೇಶದಿಂದ ಸೌಲಭ್ಯ ಒದಗಿಸಲಾಗುತ್ತಿದ್ದು, ಸದುಪಯೋಗ ಪಡೆಯಬೇಕು ಎಂದರು.
ಕೊಪ್ಪಳ ವಿವಿಯ ಉಪನ್ಯಾಸಕ ಡಾ.ಪ್ರವೀಣ ಪೊಲೀಸ್ ಪಾಟೀಲ್ ವಿಶೇಷ ಉಪನ್ಯಾಸ ನೀಡಿದರು. ಕಾಲೇಜು ಪ್ರಾಚಾರ್ಯ ಕೆ.ಎಚ್.ಛತ್ರದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಿಡಿಸಿ ಸದಸ್ಯರಾದ ವಿರೂಪಾಕ್ಷಯ್ಯ ಗಂಧದ, ಕಳಕೇಶ ಸೂಡಿ, ಬಸವರಾಜ ಓಂಟೇಲಿ, ಕಸಾಪ ಹೋಬಳಿ ಘಟಕದ ಅಧ್ಯಕ್ಷ ಮಹಾಂತೇಶ ಛಲವಾದಿ, ಪ್ರಾಧ್ಯಾಪಕರಾದ ಎಚ್.ಎಂ.ಗುಂಡಿಹಿಂದಿನ, ಡಾ.ಬಿ.ಶಶಿಕುಮಾರ್, ಇಬ್ರಾಹಿಂಸಾಬ್, ನಂದಾ, ವಿನೋದ ಸಿದ್ದಣ್ಣನವರ, ಮಂಜುಳಾ ಮಡಿವಾಳರ, ಲಕ್ಷ್ಮೀಬಾಯಿ, ಹನುಮೇಶ, ವಂಶಿಕೃಷ್ಣ, ಶರಣಪ್ಪ ತಳವಾರ್, ಮಹಾಂತೇಶ ಬುದಗುಂಪ ಇತರರಿದ್ದರು.