

ಅರಸೀಕೆರೆ ಗ್ರಾಮಾಂತ : ಪ್ರತಿಯೊಬ್ಬ ವಿದ್ಯಾರ್ಥಿಯೂ ಪರೀಕ್ಷೆ ಹಾಗೂ ಭವಿಷ್ಯದ ಭಯ ತೊರೆದು ಪರಿಶ್ರಮ ನಂಬಿ ಕನಸುಗಳ ಬೆನ್ನೇರಬೇಕು ಎಂದು ಅರಸೀಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್ ಸಲಹೆ ನೀಡಿದರು.
ತಾಲೂಕಿನ ಬಾಣಾವರ ಸಮೀಪದ ಕೋಳಗುಂದ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಮಕ್ಕಳ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಓದಿನೊಂದಿಗೆ ಸಂಸ್ಕಾರ ಕಲಿತರೆ ನಮ್ಮ ಜೀವನ ಶ್ರೇಷ್ಠವಾಗುತ್ತದೆ. ಮಕ್ಕಳು ಕೀಳರಿಮೆ ಬಿಟ್ಟು ಉನ್ನತ ಸಾಧನೆಯ ಮಾಡುವತ್ತ ಯೋಚಿಸಬೇಕು ಎಂದರು.
ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿ ನಮಿತಾ, ‘ವಿದ್ಯಾರ್ಥಿಗಳಾದ ನಾವು ಈ ಸಮಾಜಕ್ಕೆ ಏನು ಕೊಡುಗೆ ಕೊಡಬಹುದು ಎಂದು ಕೇಳಿದ ಪ್ರಶ್ನೆಗೆ, ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್ ಅವರು, ಕುವೆಂಪು ಮಾತಿನಂತೆ ’ಏನಾದರೂ ಆಗು ಮೊದಲು ನೀ ಮಾನವನಾಗು’ ಮಾನವೀಯ ಮೌಲ್ಯಗಳುಳ್ಳ ಮಗುವಾಗು ಎಂದು ಉತ್ತರಿಸಿದರು.
ಶ್ರೀದೇವಿ ಎಂಬ ವಿದ್ಯಾರ್ಥಿನಿ, ‘ಸಾರ್ ಮಕ್ಕಳ ಜೀವನದಲ್ಲಿ ಪ್ರೇರಣೆ ಹಾಗೂ ಆತ್ಮವಿಶ್ವಾಸ ಎಷ್ಟು ಮುಖ್ಯವಾಗುತ್ತದೆ’ ಎಂಬ ಪ್ರಶ್ನೆಗೆ ‘ಪ್ರತಿಯೊಬ್ಬರ ಜೀವನದಲ್ಲಿ ಪ್ರೇರಣೆ ಮುಖ್ಯ ಪಾತ್ರ ವಹಿಸುತ್ತದೆ. ನಮ್ಮೊಳಗಿರುವ ಅಂತಃ ಸತ್ವವನ್ನು ಹೊರಹೊಮ್ಮಿಸುವಲ್ಲಿ ಪ್ರೇರಣೆ ಅತಿ ದೊಡ್ಡ ಪಾತ್ರ ವಹಿಸುತ್ತದೆ. ಮಕ್ಕಳು ತಾವು ಓದುವ ಜಾಗದಲ್ಲಿ ತಾವು ಭವಿಷ್ಯದಲ್ಲಿ ಏನಾಗಬೇಕು ಎಂದು ದೊಡ್ಡ ಅಕ್ಷರಗಳಲ್ಲಿ ಬರೆದಿಡಬೇಕು ಅದನ್ನು ನೋಡಿದಾಗಲೆಲ್ಲ ನಾವು ಎಚ್ಚರ ವಹಿಸಿ ಕಾರ್ಯೊನ್ಮುಖರಾಗುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದ ಮಲ್ಲಿಕಾರ್ಜುನಚಾರ್, ಮಧುಸೂಧನ, ಕಿಶನ್, ಪ್ರೇಕ್ಷಾ, ಉಲ್ಲಾಸ್, ಕಾವ್ಯಾ, ನವ್ಯಾ ಅವರನ್ನು ಪಾಲಕರೊಂದಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೇದಿಗೆ ಮಠದ ಶ್ರೀ ಜಯಚಂದ್ರಶೇಖರ ಸ್ವಾಮೀಜಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಅರವಿಂದ್, ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಬಸವರಾಜು, ಮಹಾಲಿಂಗಪ್ಪ, ಮಂಜುನಾಥ್, ಮುಖ್ಯ ಶಿಕ್ಷಕ ಪಂಚಾಕ್ಷರಿ, ಎಸ್‌ಡಿಎಂ ಸಿ ಅಧ್ಯಕ್ಷ ಮೂರ್ತಿಶೆಟ್ಟರು, ಪಿಡಿಒ ಉಮೇಶ್, ದೈಹಿಕ ಶಿಕ್ಷಣ ಪರಿವೀಕ್ಷಕ ವಂಸತ್ ಕುಮಾರ್, ನಿವೃತ್ತ ಶಿಕ್ಷಕ ಲೋಕೇಶ್ ಇತರರು ಇದ್ದರು.