ಪೆನ್ನು, ಪುಸ್ತಕ ಹಿಡಿವ ಕೈಯಲ್ಲಿ ನೇಜಿ: ಮಳೆ ಲೆಕ್ಕಿಸದೆ ಗದ್ದೆಯಲ್ಲಿ ಕೃಷಿ ಪಾಠ ಕಲಿತ ವಿದ್ಯಾರ್ಥಿಗಳು

maddy 1
ಶಂಭೂರಿನ ಬರ್ಕೆಯಲ್ಲಿರುವ ಗದ್ದೆಯಲ್ಲಿ ಬಿ. ಮೂಡ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನೇಜಿ ನಾಟಿ ಮಾಡಿದರು.
Published on

ಸಂದೀಪ್ ಸಾಲ್ಯಾನ್ ಬಂಟ್ವಾಳ

ಐದು ಎಕರೆ ವಿಸ್ತೀರ್ಣದಲ್ಲಿ ಹರಡಿ ಕೊಂಡಿರುವ ವಿಶಾಲವಾದ ಗದ್ದೆ ಪ್ರದೇಶ... ಗದ್ದೆಯ ತುಂಬ ಕಾಲೇಜು ವಿದ್ಯಾರ್ಥಿಗಳ ಕಲರವ... ತರಗತಿ ಕೋಣೆಯಲ್ಲಿ ಪೆನ್ನು, ಪುಸ್ತಕ, ಓದು ಎಂದು ಪಠ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ ವಿದ್ಯಾರ್ಥಿಗಳು ಭಾನುವಾರ ಕೈಯಲ್ಲಿ ನೇಜಿ ಹಿಡಿದು, ಗದ್ದೆಯಲ್ಲಿ ನಾಟಿ ಮಾಡಿ ಕೃಷಿ ಪಾಠ ಕಲಿತರು. ಸುರಿಯುವ ಮಳೆಯನ್ನೂ ಲೆಕ್ಕಿಸದೆ ಕೆಸರುಗದ್ದೆಯಲ್ಲಿ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡು ಅಕ್ಷರಶಃ ಮಣ್ಣಿನ ಮಕ್ಕಳೆನಿಸಿಕೊಂಡರು!.

ನರಿಕೊಂಬು ಗ್ರಾಮದ ಶಂಭೂರಿನ ಬರ್ಕೆ ಎಂಬಲ್ಲಿ ಹಲವಾರು ವರ್ಷಗಳಿಂದ ಹಡಿಲು ಬಿದ್ದ ಗದ್ದೆಯಲ್ಲಿ ಕಳೆದ 4 ವರ್ಷಗಳಿಂದ ಶಂಭೂರಿನಲ್ಲಿರುವ ದಕ್ಷಿಣದ ಶಿರ್ಡಿ ಸಾಯಿ ಮಂದಿರದ ವತಿಯಿಂದ ಭತ್ತದ ಬೇಸಾಯ ಮಾಡಿಕೊಂಡು ಬರಲಾಗುತ್ತಿದೆ. ಬೇರೆ ಸಂಘ ಸಂಸ್ಥೆಗಳು, ವಿದ್ಯಾರ್ಥಿಗಳು ಅವರ ಈ ಕೃಷಿ ಕಾರ್ಯಕ್ಕೆ ಸಹಕಾರ ನೀಡುತ್ತಿದ್ದರು. ಈ ಬಾರಿ ಬಿ.ಸಿ.ರೋಡಿನ ಗೂಡಿನ ಬಳಿಯಲ್ಲಿರುವ ಬಿ.ಮೂಡ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಸಾಥ್ ನೀಡಿದ್ದಾರೆ. ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಗದ್ದೆಗಿಳಿದು ನೇಜಿ ಕಿತ್ತು, ನಾಟಿ ಮಾಡಿ ಕೆಸರು ಗದ್ದೆಯಲ್ಲಿ ಸಾಗುವಳಿ ಮಾಡಿ ಸಂಭ್ರಮಿಸಿದರು. ಸ್ಥಳೀಯ ಕೃಷಿಕ ಮಹಿಳೆಯರು, ಸಾಯಿ ಮಂದಿರದ ಮುಖ್ಯಸ್ಥ ಸಾಯಿ ಸೂರಜ್ ವಿದ್ಯಾರ್ಥಿಗಳಿಗೆ ನೇಜಿ ನಾಟಿ ಮಾಡಲು ಮಾರ್ಗದರ್ಶನ ಮಾಡಿದರು. ಹಿರಿಯರ ಸೂಚನೆಯನ್ನು ಪಾಲಿಸಿಕೊಂಡು ಮೇಟಿ ವಿದ್ಯೆಗಿಂತ ನಾಟಿ ವಿದ್ಯೆಯೇ ಮೇಲು ಎನ್ನುವುದನ್ನು ಬಯಲು ವಿದ್ಯಾಲಯದಲ್ಲಿ ಅನುಭವದ ಮೂಲಕ ಅರಿತುಕೊಂಡರು.

ಮಾದರಿಯಾದ ಉಪನ್ಯಾಸಕರು

ಬಿ.ಮೂಡ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಉಪನ್ಯಾಸಕರು ನೇಜಿ ನಾಟಿ ಮಾಡಿ ಗಮನ ಸೆಳೆದರು. ತರಗತಿ ಕೋಣೆಯೊಳಗೆ ಸಿಗದ ಪಾಠವನ್ನು ಗದ್ದೆಯಲ್ಲಿ ಪಡೆದುಕೊಂಡರು. ಕಾಲೇಜಿನ ಪ್ರಾಂಶುಪಾಲ ಯೂಸುಫ್ ವಿಟ್ಲ, ಹಿರಿಯ ಉಪನ್ಯಾಸಕ ದಾಮೋದರ್ ಇ., ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಬಾಲಕೃಷ್ಣ ನಾಯ್ಕ ಬೆಳ್ಳಾರೆ, ಉಪನ್ಯಾಸಕರಾದ ಅಬ್ದುಲ್ ರಝಾಕ್, ದಿವ್ಯ, ರಾಧ, ಶಮಿತ, ಹರ್ಷಿತಾ ಹಾಗೂ ಶಿಕ್ಷಕಿ ಗೀತಾ, ಸ್ಥಳೀಯ ಮಹಿಳೆಯರು, ಯುವಕರು ವಿದ್ಯಾರ್ಥಿಗಳೊಂದಿಗೆ ಸಾಗುವಳಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡರು.

ಬೇಸಾಯದ ಅಕ್ಕಿ ಭಕ್ತರಿಗೆ!

ಕಳೆದ 4 ವರ್ಷಗಳಿಂದ ಶಿರ್ಡಿ ಸಾಯಿ ಮಂದಿರದ ಮೂಲಕ ಈ ಗದ್ದೆಯಲ್ಲಿ ಭತ್ತದ ಸಾಗುವಳಿ ಮಾಡಿ ಬಂದ ಅಕ್ಕಿಯನ್ನು ರಾಮನವಮಿಯ ದಿನ ಕ್ಷೇತ್ರಕ್ಕೆ ಭೇಟಿ ನೀಡುವ ಎಲ್ಲ ಭಕ್ತರಿಗೆ ತಲಾ 1 ಕೆಜಿಯಂತೆ ಪ್ರಸಾದ ರೂಪದಲ್ಲಿ ಹಂಚಲಾಗುತ್ತದೆ. ಅಗತ್ಯವಿರುವ ಬಡವರಿಗೂ ಅಕ್ಕಿಯನ್ನು ಹಂಚಿ ಉಳಿಕೆಯಾದ ಅಕ್ಕಿಯನ್ನು ಸಾಯಿಮಂದಿರದಲ್ಲಿ ಪ್ರತಿ ಗುರುವಾರ ಮಧ್ಯಾಹ್ನ ಹಾಗೂ ರಾತ್ರಿಯ ಅನ್ನಪ್ರಸಾದಕ್ಕೆ ಬಳಸಿಕೊಳ್ಳುವುದಾಗಿ ಶಿರ್ಡಿ ಸಾಯಿ ಮಂದಿರದ ಮುಖ್ಯಸ್ಥರಾದ ಸಾಯಿ ಸೂರಜ್ ತಿಳಿಸಿದರು.

ಪಾಠ ಪ್ರವಚನದ ಜತೆಗೆ ಪ್ರಕೃತಿಯಲ್ಲೂ ಬೆರೆಯಬೇಕು, ಕೃಷಿ ಚಟುವಟಿಕೆಯಲ್ಲಿ ಪ್ರಾಯೋಗಿಕ ಅನುಭವವನ್ನು ಪಡೆಯಬೇಕು ಎನ್ನುವ ಉದ್ದೇಶದಿಂದ ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ಯೂಸುಫ್ ವಿಟ್ಲ, ಪ್ರಾಂಶುಪಾಲರು, ಸರ್ಕಾರಿ ಪದವಿಪೂರ್ವ ಕಾಲೇಜು ಬಿ.ಮೂಡ ಕಾಲೇಜು ವಿದ್ಯಾರ್ಥಿಗಳಿಗೆ ಕೃಷಿಯ ಅನುಭವವನ್ನು ಮೂಡಿಸುವ ಪ್ರಯತ್ನ ಇದು. ಗದ್ದೆಗಳನ್ನು ಉಳಿಸಿ ಬೆಳೆಸುವ ಜತೆಗೆ ಕೃಷಿ ಚಟುವಟಿಕೆಯನ್ನು ತಿಳಿಸಿಕೊಟ್ಟು ಅವರಲ್ಲಿ ವಿಶೇಷ ಅನುಭವ ಮೂಡಿಸಲಾಗುತ್ತಿದೆ. 100 ಮಕ್ಕಳು ಕುತೂಹಲದಿಂದ ಭಾಗವಹಿಸಿದ್ದು ಮುಂದೆ ನಾವೆಲ್ಲರೂ ಕೃಷಿ ಚಟುವಟಿಕೆಯಲ್ಲಿ ತೊಡಗಿಸಕೊಳ್ಳಬೇಕು ಎನ್ನುವ ಇಚ್ಚಾಶಕ್ತಿಯನ್ನು ಮೂಡಿಸಿದೆ. ಬಾಲಕೃಷ್ಣ ನಾಯ್ಕ, ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net