ಈಡಿಗ ಸಮುದಾಯದ ಶೈಕ್ಷಣಿಕ ಸಾಧನೆ ಉತ್ತಮ

31 sgr 2
Published on

ಸಾಗರ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡುವುದು ಉತ್ತಮ ಕಾರ್ಯ ಎಂದು ಸಮಾಜಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಎಂ.ಹಾಲಪ್ಪ ಹೇಳಿದರು.

ಆರ್ಯ ಈಡಿಗ ಸಮುದಾಯ ಭವನದಲ್ಲಿ ಆರ್ಯ ಈಡಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ ಭಾನುವಾರ ಆಯೋಜಿಸಿದ್ದ ನಿವೃತ್ತ ನೌಕರರಿಗೆ ಸನ್ಮಾನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಈಡಿಗ ಸಮುದಾಯ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುತ್ತಿದೆ ಎಂದರು.

ಮಕ್ಕಳು ಉನ್ನತ ಸ್ಥಾನಕ್ಕೆ ತಲುಪಬೇಕೆಂಬುದು ಪ್ರತಿಯೊಬ್ಬ ಪಾಲಕರ ಕನಸು. ಸಾಧನೆ ಮಾಡಿದ ಮಕ್ಕಳನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸುವುದರಿಂದ ಭವಿಷ್ಯದಲ್ಲಿ ಇನ್ನಷ್ಟು ಎತ್ತರಕ್ಕೇರಲು ಸ್ಪೂರ್ತಿ ಸಿಗುತ್ತದೆ. ಅನೇಕ ವರ್ಷಗಳ ಕಾಲ ಸರ್ಕಾರಿ ನೌಕರಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು ನಿವೃತ್ತಿ ನಂತರವೂ ಸಮಾಜದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕೆಂದು ಸಲಹೆ ನೀಡಿದರು.

ಸಂಘದ ಅಧ್ಯಕ್ಷ ಡಿ.ಗಣಪತಪ್ಪ ಮಾತನಾಡಿ, 2004ರಿಂದಲೂ ಸಂಘವು ನಿವೃತ್ತ ನೌಕರರನ್ನು ಸನ್ಮಾನಿಸುವುದು, ಸಂಘದ ಸದಸ್ಯರು ಉನ್ನತ ಸಾಧನೆ ಮಾಡಿದಾಗ ಅವರನ್ನು ಗೌರವಿಸುವುದು, ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಸಂಘದಲ್ಲಿ 400ಕ್ಕೂ ಹೆಚ್ಚು ಸದಸ್ಯರಿದ್ದು, ಸಂಘಟನೆ ಭಾಗವಾಗಿ ಕೆಲಸ ಮಾಡುತ್ತಿದ್ದಾರೆ. ಸಂಘವು ಸ್ವಂತ ಕಟ್ಟಡ ಹೊಂದಬೇಕೆನ್ನುವ ಉದ್ದೇಶವಿದ್ದು, ಮುಂದಿನ ದಿನಗಳಲ್ಲಿ ಅದನ್ನು ಕಾರ್ಯಗತಗೊಳಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ವೇದಿಕೆಯಲ್ಲಿ ಪ್ರಾಂತ್ಯ ಆರ್ಯ ಈಡಿಗರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಸಿ.ಪರಶುರಾಮಪ್ಪ, ಪ್ರಮುಖರಾದ ಪಾಂಡುರಂಗಪ್ಪ, ಮಂಜಪ್ಪ, ಜ್ಯೋತಿ, ಪ್ರೊ. ಮಹಾಬಲೇಶ್ವರ್, ಟಿ.ಪರಮೇಶ್ವರ್ ಇದ್ದರು. ಜ್ಯೋತಿ ಪ್ರಾರ್ಥಿಸಿದರು. ಕಾರ್ಯದರ್ಶಿ ಎಚ್.ಬಿ.ಗಣಪತಿ ಸ್ವಾಗತಿಸಿದರು. ಎಚ್.ಸ್ವಾಮಿರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಕ್ಷ್ಮಣಪ್ಪ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net