

ಚಿಕ್ಕೋಡಿ: ಪ್ರತಿಭಾನ್ವಿತ 20 ಸರ್ಕಾರಿ ಪ್ರೌಢಶಾಲೆಗಳಲ್ಲಿ ಸಾಧನೆಗೈದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ 60 ವಿದ್ಯಾರ್ಥಿನಿಯರಿಗೆ ತಲಾ 5 ಸಾವಿರ ರೂ. ನಗದು ಪ್ರೋತ್ಸಾಹಧನವನ್ನು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಾರ್ಯಾಲಯದ ವತಿಯಿಂದ ನೀಡಲಾಗುತ್ತಿದೆ ಎಂದು ಪ್ರಾದೇಶಿಕ ವ್ಯವಸ್ಥಾಪಕ ಜಿ.ಪಿ.ಭಟ್ ಹೇಳಿದರು.
ಪಟ್ಟಣದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ಪ್ರೌಢಶಾಲೆಗಳ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ತಲಾ 5 ಸಾವಿರ ರೂ. ವಿತರಿಸಿ ಮಾತನಾಡಿ, ಪ್ರತಿಭಾ ಪುರಸ್ಕಾರ ಯೋಜನೆಯಡಿಯಲ್ಲಿ ಪ್ರೋತ್ಸಾಹಧನ ನೀಡಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
ಜಿಲ್ಲೆಗಳಲ್ಲಿ 10 ಪ್ರಾದೇಶಿಕ ಕಚೇರಿ ಹೊಂದಿದ್ದು ಎಲ್ಲ ಕಡೆಗೂ ಪುರಸ್ಕಾರ ಯೋಜನೆಯಡಿ 60 ವಿದ್ಯಾರ್ಥಿನಿಯರಿಗೆ 5 ಸಾವಿರ ರೂ. ಗಳನ್ನು ವಿತರಿಸಲಾಗುತ್ತಿದೆ. ವಿದ್ಯಾರ್ಥಿನಿಯರಿಗೆ ಶಿಕ್ಷಣದ ಮಹತ್ವ ಹಾಗೂ ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತೆಗಳಾದ ಪಿಎಂಎಸ್‌ಬಿವೈ, ಜೆಜೆಬಿವೈ, ಎಪಿವೈ ಕುರಿತು ತಿಳಿಸಿ ಅವುಗಳ ಸದುಪಯೋಗಪಡೆದುಕೊಳ್ಳಿ ಎಂದರು. ಸುಶೀಲಕುಮಾರ ಪಾಟೀಲ ನಿರೂಪಿಸಿದರು. ರಾಕೇಶ ಕಮತೆ ವಿತರಿಸಿದರು.