

ಬೆಳಗಾವಿ: ಜಾಗತಿಕ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಆಟೋಮೊಬೈಲ್ ಕ್ಷೇತ್ರ ವೇಗವಾಗಿ ಬೆಳೆಯುತ್ತಿದ್ದು, ಯುವ ಇಂಜಿನಿಯರ್‌ಗಳು ಸಂಶೋಧನೆಗಳಿಗೆ ಆದ್ಯತೆ ನೀಡಬೇಕು ಎಂದು ಮಹಾರಾಷ್ಟ್ರದ ಪುಣೆಯ ಭಾರತ ಆಟೋಮೊಟಿವ್ ಸಂಶೋಧನೆ ಸಂಘದ ಮುಖ್ಯ ವ್ಯವಸ್ಥಾಪಕ ರಾಹುಲ ಮಹೀಂದ್ರಕರ ಹೇಳಿದರು.
ನಗರದ ಕೆಎಲ್‌ಎಸ್ ಗೊಗಟೆ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರ್ ವಿಭಾಗ ಹಮ್ಮಿಕೊಂಡಿದ್ದ ‘ವಿದ್ಯುತ್ ವಾಹನ ಸಾಮರ್ಥ್ಯ ಕೇಂದ್ರ’ ಉದ್ಘಾಟಿಸಿ ಮಾತನಾಡಿದ ಅವರು, ಆಟೋಮೊಬೈಲ್ ಜತೆಗೆ ಎಲೆಕ್ಟ್ರಿಕಲ್ ವಾಹನಗಳ ಕ್ಷೇತ್ರ ವೇಗವಾಗಿ ಬೆಳೆಯುತ್ತಿದ್ದು, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕಲಿಕೆ ಜತೆಗೆ ವೃತ್ತಿಪರತೆ ಮೈಗೂಡಿಸಿಕೊಳ್ಳಬೇಕು ಎಂದರು.
ಓಲಾ ಎಲೆಕ್ಟ್ರಿಕ್ ಕಂಪನಿ ಮುಖ್ಯ ಇಂಜಿನಿಯರ್ ಪ್ರದೀಪ ಚಂದ್ರಶೇಖರನ್ ಮಾತನಾಡಿ, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕಲಿಕಾ ಸಮಯದಲ್ಲೇ ಆವಿಷ್ಕಾರಗಳಿಗೆ ಆದ್ಯತೆ ಕೊಡಬೇಕು. ಸದ್ಯ ದೇಶದಲ್ಲಿ ಶೇ1.20 ಮಾತ್ರ ಎಲೆಕ್ಟ್ರಿಕ್ ವಾಹನಗಳು ರಸ್ತೆ ಮೇಲೆ ಓಡಾಡುತ್ತಿದ್ದು, 2030ರ ವೇಳೆಗೆ ಶೇ.30ಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರಗಳು ಆದ್ಯತೆ ನೀಡುತ್ತಿವೆ ಎಂದರು.
ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಕ್ಷೇತ್ರಕ್ಕೆ ಬೇಡಿಕೆ ಬರಲಿದ್ದು, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರ್‌ಗಳಿಗೆ ಸಾಕಷ್ಟು ಅವಕಾಶಗಳಿವೆ. ಮುಂಬರುವ ದಿನಗಳಲ್ಲಿ ಓಲಾ ಕಂಪನಿಯಿಂದ ತ್ರಿವಿಲ್ ಎಲೆಕ್ಟ್ರಿಕ್ ವಾಹನಗಳು ರಸ್ತೆಗೆಗಿಳಿಯಲಿವೆ ಎಂದು ಹೇಳಿದರು.
ಬೆಂಗಳೂರಿನ ಡೆಸುಬೆಲ್ಸ್ ಲ್ಯಾಬ್ ಪ್ರೈವೆಟ್ ಲಿ. ಕಂಪನಿ ಸಿಇಒ ಸೂರಜ್ ಎಸ್.ಡಿ. ಮಾತನಾಡಿ, ಕೆಎಲ್‌ಎಸ್ ಗೊಗಟೆ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗ ಆರಂಭಿಸಿರುವ ವಿದ್ಯುತ್ ವಾಹನ ಸಾಮರ್ಥ್ಯ ಕೇಂದ್ರಕ್ಕೆ ಹೆಚ್ಚು ಬೇಡಿಕೆ ಬರಲಿದೆ. ಅಲ್ಲದೆ, ಸಾಕಷ್ಟು ಕಂಪನಿಗಳು ಕೇಂದ್ರದ ಜತೆ ಕೈ ಜೋಡಸಲಿವೆ ಎಂದರು.
ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಅಲ್ಟ್ರಾಟೈಲ್ಸ್, ಸಾಯಿ ರುಕ್ಮಿಣಿ ಎಂಟರ್‌ಪ್ರೈಸಸ್ ಮಾಲೀಕ ದಿನೇಶ ಶೆಟ್ಟಿ ಅವರು ಕೆಎಲ್‌ಎಸ್ ಜಿಐಟಿ ಮತ್ತು ಡೆಸಿಬಲ್ಸ್ ಲ್ಯಾಬ್ ಪ್ರೈ.ಲಿ. ನಡುವೆ ಒಡಂಬಡಿಕೆ ಮಾಡಿಕೊಂಡರು. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಹಳೇ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು.
ಕೆಎಲ್‌ಎಸ್ ಜಿಐಟಿ ಚೇರ್ಮನ್ ರಾಜೇಂದ್ರ ಬೆಳಗುಂಕರ್, ಪ್ರೊ.ರಾಹುಲ ಸೂರ್ಯವಂಶಿ, ಪ್ರೊ.ಸತೀಶ ದೊಡಮನಿ, ಪ್ರೊ.ಅವಿನಾಶ ದೇಶಪಾಂಡೆ, ಡಾ.ಡಿ.ಬಿ.ಕುಲಕರ್ಣಿ, ಪ್ರಾಚಾರ್ಯ ಡಾ.ಎಂ.ಎಸ್. ಪಾಟೀಲ, ಪ್ರೊ.ಡಿ.ಎ.ಕುಲಕರ್ಣಿ ಇತರರಿದ್ದರು.