ಹೊಳೆನರಸೀಪುರ: ಹಾಸನ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳ ಸ್ನಾತಕೋತ್ತರ ವಿಭಾಗದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿದ್ಯಾರ್ಥಿ ವೇತನ ಬಾರದೆ ತೀವ್ರ ತೊಂದರೆ ಆಗಿದೆ.
ಈ ಹಿಂದೆ ಸ್ನಾತಕೋತರ ಪದವಿ ವ್ಯಾಸಂಗ ಮಾಡಿದ್ದ ವಿದ್ಯಾರ್ಥಿಗಳಿಗೆ ನವೆಂಬರ್ ಅಥವಾ ಡಿಸೆಂಬರ್‌ಗೆ ಮುನ್ನ ವರ್ಷಕ್ಕೆ 15 ಸಾವಿರ ರೂ. ವಿದ್ಯಾರ್ಥಿ ವೇತನ ಬಂದಿದೆ. ಆದರೆ ಈ ಬಾರಿ 23-24, 24-25 ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಇನ್ನೂ ವಿದ್ಯಾರ್ಥಿ ವೇತನ ಬಂದಿಲ್ಲ. ಈ ವೇತನ ಪಡೆಯಲು ಹಾಸನ ವಿಶ್ವವಿದ್ಯಾಲಯ ಪ್ರತಿ ವಿದ್ಯಾರ್ಥಿಯ ಐ.ಡಿ. ನಂಬರ್ ಸಕಾಲದಲ್ಲಿ ನೋಂದಾಯಿಸಿಕೊಡಬೇಕು. ಈ ಬಾರಿ ಅವರು ಎರಡು ದಿನ ತಡವಾಗಿ ನೋಂದಾಯಿಸಿದ ಹಿನ್ನೆಲೆಯಲ್ಲಿ ಸಮಯ ಮೀರಿದೆ ಎಂದು ಸಬೂಬು ಹೇಳುತ್ತ್ತಿದ್ದಾರೆ. ಆದರೆ ಅವಧಿ ಮೀರಿದ್ದರೂ ಎಸ್‌ಎಸ್‌ಪಿ ಪೋರ್ಟಲ್ ನಲ್ಲಿ ಅರ್ಜಿ ಸ್ವೀಕರಿಸಿದ್ದಾರೆ. ಆದರೆ ವಿದ್ಯಾರ್ಥಿ ವೇತನ ಮಾತ್ರ ಇನ್ನೂ ಬಂದಿಲ್ಲ ಎನ್ನುತ್ತಿದ್ದಾರೆ. ಈ ಬಗ್ಗೆ ವಿಚಾರಿಸಿದರೆ ಯಾವುದೇ ಮಹಿತಿ ನೀಡುತ್ತಿಲ್ಲ. ವಿಶ್ವವಿದ್ಯಾಲಯ ಆಡಳಿತ ಹಾಗೂ ಸರ್ಕಾರದ ಧೋರಣೆಯಿಂದ ಹಾಸನ ಜಿಲ್ಲೆಯ ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವೇತನ ಬಾರದೆ ತೀವ್ರ ತೊಂದರೆ ಆಗಿದೆ. ಈ ಬಗ್ಗೆ ಹಾಸನ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಮನವಿ ಮಾಡುತ್ತೇವೆ. ಮನವಿಗೆ ಸ್ಪಂದಿಸದಿದ್ದರೆ ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ಹಾಸನ ಜಿಲ್ಲೆಯ ಎಲ್ಲ ಕಾಲೇಜುಗಳ ಸ್ನಾತಕೋತರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ತಾಲೂಕಿನ ಪಡವಲಹಿಪ್ಪೆ ಎಚ್.ಡಿ.ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಮುಖಂಡರಾದ ಧನಂಜಯ, ಸಂದೀಪ್, ಕಿರಣ್ ಎಚ್ಚರಿಕೆ ನೀಡಿದ್ದಾರೆ.
ಐಡಿ ನಂಬರ್ ಕೊಡುವುದು ತಡವಾಯಿತು ಎನ್ನುವುದು ಒಂದು ನೆಪ ಅಷ್ಟೆ. ಆದರೆ ವಾಸ್ತವವಾಗಿ ಸರ್ಕಾರದಿಂದ ವಿದ್ಯಾರ್ಥಿ ವೇತನ ಬಿಡುಗಡೆಯೇ ಆಗಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳನ್ನು ಕೇಳಿದರೆ ಸರ್ಕಾರ ಹಣ ಬಿಡುಗಡೆ ಮಾಡದಿದ್ದರೆ ಹೇಗೆ ಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ ಎಂದು ಹೆಸರು ಬಹಿರಂಗಪಡಿಸದ ಹಾಸನ ಜಿಲ್ಲೆಯ ಸರ್ಕಾರಿ ಕಾಲೇಜೊಂದರ ಪ್ರಾಂಶುಪಾಲರು ತಿಳಿಸಿದ್ದಾರೆ.
---------