

ಸಿದ್ದಾಪುರ: ತಾಲೂಕಿನ ಹುಲ್ಕುತ್ರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಇಕೋ ಕ್ಲಬ್ನಡಿ ಭತ್ತದ ಸಸಿ ನಾಟಿ ಮಾಡಿದರು.
ರಜಾ ದಿನವಾದ ಭಾನುವಾರ ಶಾಲೆಯ ಪಕ್ಕದ ಊರಾದ ಹೆಮ್ಮಜನಿಯ ಲೋಕೇಶ ಪದ್ಮನಾಬ ಗೌಡ ಅವರ ಗದ್ದೆಯಲ್ಲಿ 11 ವಿದ್ಯಾರ್ಥಿಗಳು ಸುರಿಯುತ್ತಿರುವ ಮಳೆಯಲ್ಲಿ ಛತ್ರಿ ಹಿಡಿದುಕೊಂಡು ಹಾಗೂ ಪ್ಲಾಸ್ಟಿಕ್ ಕೊಪ್ಪೆ ಹಾಕಿಕೊಂಡು ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ಕೊಡಗಿನ ಕೆಎಚ್ಬಿ-11 ಭತ್ತದ ತಳಿಯನ್ನು ಅಂದಾಜು 4 ಗುಂಟೆ ಕ್ಷೇತ್ರದಲ್ಲಿ ನಾಟಿ ಕಾರ್ಯ ನಡೆಸಿ ಮೆಚ್ಚುಗೆ ಗಳಿಸಿದರು.
ಎಸ್ಡಿಎಂಸಿ ಉಪಾಧ್ಯಕ್ಷೆ ವಾಣಿ ನಿತ್ಯಾನಂದ ಗೌಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯಶಿಕ್ಷಕ ದರ್ಶನ ಹರಿಕಾಂತ ಹಾಗೂ ಗಂಗೆ ಮಾಬ್ಲ ಗೌಡ ಸಸಿ ನೆಡುವ ರೀತಿ ಹಾಗೂ ಸಸಿಯ ಅಂತರವನ್ನು ತಿಳಿಸಿಕೊಟ್ಟರು.
ಪ್ರಗತಿಪರ ಕೃಷಿಕ ನಾಗರಾಜ ಶ್ರೀನಿವಾಸ ಶಾನಭಾಗ ಭತ್ತದ ಬೀಜ ನೀಡಿ ಮಕ್ಕಳ ಕಾರ್ಯಕ್ಕೆ ಪೋ›ತ್ಸಾಹ ನೀಡಿದರು. ಬಿಳಗಿಯ ಪ್ರಗತಿಪರ ಕೃಷಿಕ ರವಿಲೋಚನ ಮಡಗಾಂವಕರ ಮಾರ್ಗದರ್ಶನ ನೀಡಿದ್ದರು. ವಾಣಿ ಲೋಕೇಶ ಗೌಡ, ಲೋಕೇಶ ಪದ್ಮನಾಭ ಗೌಡ, ಜಗದೀಶ ಗೌಡ ಇತರರಿದ್ದರು.