ಹೊಳೆಗೆ ಬಿದ್ದು ವಿದ್ಯಾರ್ಥಿಗಳಿಬ್ಬರು ಸಾವು

death
Published on

ಸಿದ್ದಾಪುರ: ಮಚ್ಚಟ್ಟು ಗ್ರಾಮದ ಕಳಿನಜೆಡ್ಡು ಬಳಿಯ ವಾರಾಹಿ ಹೊಳೆಯಲ್ಲಿ ಗುರುವಾರ ಕಾಲುಜಾರಿ ಬಿದ್ದು ನೀರಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.

ಉಳ್ಳೂರು-74 ಗ್ರಾಮದ ಗುಡಿಕೇರಿ ಮೋಹನ್ ಅವರ ಪುತ್ರ ಗಣೇಶ ಎಚ್.(17) ಮತ್ತು ಹಾಡಿ ದೇವಸ್ಥಾನದ ಮಂಜುನಾಥ ಮಡಿವಾಳ ಅವರ ಪುತ್ರ ಸುಮಂತ್(17) ಸಾವಿಗೀಡಾದವರು.

ಇಬ್ಬರೂ ಶಂಕರನಾರಾಯಣ ಸರ್ಕಾರಿ ಪ್ರಥಮ ಕಾಲೇಜಿನ ಪ್ರಥಮ ಪಿಯುಸಿಯ ವಿದ್ಯಾರ್ಥಿಗಳು. ಶುಕ್ರವಾರ ಪರೀಕ್ಷೆ ಇರುವುದರಿಂದ ಇಬ್ಬರು ಸ್ನೇಹಿತರ ಜತೆಗೂಡಿ, ಕಳಿನಜೆಡ್ಡು ಬಳಿ ಇರುವ ಮತ್ತೊಬ್ಬ ಸ್ನೇಹಿತನ ಬಳಿ ಓದಲು ಪುಸ್ತಕ ತೆಗೆದುಕೊಂಡು ಹೋಗಿದ್ದರು. ಅಲ್ಲಿಂದ ನಾಲ್ವರು ಜತೆಗೂಡಿ ವಾರಾಹಿ ಹೊಳೆಯಲ್ಲಿ ಸ್ನಾನಕ್ಕೆ ಇಳಿಯುವಾಗ ಆಕಸ್ಮಿಕವಾಗಿ ಇಬ್ಬರು ಕಾಲು ಜಾರಿ ನದಿಗೆ ಬಿದ್ದು ಮುಳುಗಿ ಮೃತಪಟ್ಟಿದ್ದಾರೆ. ಸ್ನೇಹಿತರು ಇಬ್ಬರನ್ನು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಘಟನಾ ಸ್ಥಳಕ್ಕೆ ಅಮಾಸೆಬೈಲು ಪೊಲೀಸ್ ಠಾಣೆಯ ಠಾಣಾಧಿಕಾರಿ ಸುಬ್ಬಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ.

ಅಪಾಯಕಾರಿ ಹೊಳೆ: ವಾರಾಹಿ ಹೊಳೆ ಆಳ ಮತ್ತು ಸುಳಿಯಿಂದ ಕೂಡಿದ್ದು, ಅಪಾಯಕಾರಿಯಾಗಿದೆ. ಹೊಳೆಯಲ್ಲಿ ಯಾವಾಗಲು ನೀರು ತುಂಬಿಕೊಂಡಿರುತ್ತದೆ. ಹೊಳೆಗೆ ಯಾವುದೇ ಮುನ್ಸೂಚನೆ ನೀಡದೆ ಆಗಾಗ ವಿದ್ಯುತ್ ಉತ್ಪಾದನೆಯ ನೀರನ್ನು ಬಿಡುವುದರಿಂದ ಅಪಾಯದ ಮಟ್ಟದಲ್ಲಿ ಹರಿಯುತ್ತದೆ. ಹೀಗೆ ನೀರು ಬಿಟ್ಟಾಗ ಅನೇಕ ಮಂದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದಾರೆ.

ಸುಮಂತ್ ಒಬ್ಬನೇ ಮಗ: ಸುಮಂತ್ ಉಳ್ಳೂರು-74 ಗ್ರಾಮದ ಹಾಡಿದೇವಸ್ಥಾನದ ಮಂಜುನಾಥ ಮಡಿವಾಳ ಮತ್ತು ಕುಸುಮಾ ದಂಪತಿಗೆ ಏಕೈಕ ಪುತ್ರ. ಈತನ ಹೆತ್ತವರು ಹುಬ್ಬಳಿಯಲ್ಲಿ ಹೋಟೆಲ್ ನಡೆಸಿಕೊಂಡಿದ್ದು, ಮಗನ ವಿದ್ಯಾಭ್ಯಾಸಕ್ಕಾಗಿ ಅಜ್ಜ-ಅಜ್ಜಿಯ ಮನೆಯಲ್ಲಿ ಬಿಟ್ಟಿದ್ದರು.

ಬಡ ಕುಟುಂಬ: ಉಳ್ಳೂರು-74 ಗ್ರಾಮದ ಗುಡಿಕೇರಿ ಮೋಹನ್ ಮತ್ತು ಸುಮನಾ ದಂಪತಿಯ ಮೂವರು ಪುತ್ರರಲ್ಲಿ ಗಣೇಶ ಕಿರಿಯವ. ಬಡತನದ ನಡುವೆ ಕಷ್ಟಪಟ್ಟು ಮಕ್ಕಳಿಗೆ ವಿದ್ಯೆ ಕೋಡಿಸಿದ್ದಾರೆ. ಮಗನ ಸಾವಿನಿಂದ ಮನೆಯಲ್ಲಿ ತಂದೆ ತಾಯಿ ಮತ್ತು ಕುಟುಂಬ ಆಕ್ರಂದನ ಮುಗಿಲು ಮುಟ್ಟಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net