

ಶನಿವಾರಸಂತೆ: ಸಮಿಪದ ದುಂಡಳ್ಳಿ ಗ್ರಾಮ ಪಂಚಾಯಿತಿಯ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿ ಗ್ರಂಥಾಲಯ ಸಪ್ತಾಹ ದಿನವನ್ನು ಆಚರಿಸಲಾಯಿತು. ದುಂಡಳ್ಳಿ ಗ್ರಾಪಂ ಅಧ್ಯಕ್ಷೆ ಸತ್ಯವತಿ ಗ್ರಂಥಾಲಯ ಸಪ್ತಾಹ ಉದ್ಘಾಟಿಸಿದರು.
ದಿನದ ಮಹತ್ವ ಕುರಿತು ದುಂಡಳ್ಳಿ ಡಿಜಿಟಲ್ ಗ್ರಂಥಾಲಯದ ಮೇಲ್ವಿಚಾರಕಿ ಎಸ್.ಪಿ.ದಿವ್ಯಾ ಮಾತನಾಡಿ, ಗ್ರಂಥಾಲಯ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಗ್ರಂಥಾಲಯ ಇಲಾಖೆ ಪ್ರತಿವರ್ಷ ನ.14 ರಿಂದ 20ರವರೆಗೆ ಗ್ರಂಥಾಲಯ ಸಪ್ತಾಹವನ್ನು ವಾರ್ಷಿಕ ಕಾರ್ಯಕ್ರಮವಾಗಿ ಆಚರಣೆ ಮಾಡುತ್ತಿದೆ. ಗ್ರಂಥಪಾಲಕರು ಗ್ರಂಥಾಲಯ ಸಮುದಾಯವನ್ನು ಅಭಿವೃದ್ಧಿಪಡಿಸುವ ಕಾರ್ಯ ಮಾಡುತ್ತಿದ್ದಾರೆ. ಪುಸ್ತಕ, ಗ್ರಂಥಗಳನ್ನು ಓದುವುದರಿಂದ ಜ್ಞಾನಶಕ್ತಿ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗ್ರಾಪಂ ಅಭಿವೃದ್ದಿ ಅಧಿಕಾರಿ ಆಯಿಷಾ ಮಾತನಾಡಿ, ಗ್ರಂಥಾಲಯ ಶಿಕ್ಷಣದ ಅವಿಭಾಜ್ಯ ಅಂಗವಾಗಿದ್ದು ಈ ದಿಸೆಯಲ್ಲಿ ವಿದ್ಯಾರ್ಥಿಗಳು, ಯುವ ಸಮೂಹ ಗ್ರಂಥಾಲಯಗಳಲ್ಲಿ ದೊರೆಯುವ ಪುಸ್ತಕ, ಕೃತಿಗಳನ್ನು ಓದುವುದರ ಜೊತೆಯಲ್ಲಿ ಡಿಜಿಟಲ್ ಕೇಂದ್ರದಲ್ಲಿರುವ ಮಾಹಿತಿ ಇನ್ನಿತ್ತರ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಶಾಲಾ ಶಿಕ್ಷಕಿ ಧನು, ಅಂಗನವಾಡಿ ಶಾಲಾ ಶಿಕ್ಷಕಿ ಅಶ್ವಿನಿ ಪ್ರಮುಖರಾದ ತಮ್ಮೇಗೌಡ ವಿದ್ಯಾರ್ಥಿಗಳು, ಓದುಗರು ಹಾಜರಿದ್ದರು.