

ಕೊಟ್ಟೂರು: ವಿದ್ಯಾರ್ಥಿಗಳು ಪಠ್ಯಪುಸ್ತಕಗಳೊಂದಿಗೆ ಹೊಸ ವಿಷಯಗಳತ್ತ ಗಮನಹರಿಸುವ ಮೂಲಕ ಕುತೂಹಲ ಬೆಳಸಿಕೊಂಡರೆ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ಸಾಹಿತಿ ಭೀಮಣ್ಣ ಗಜಾಪುರ ಹೇಳಿದರು.
ಪಟ್ಟಣದಲ್ಲಿ ಗಜಾಪುರದ ಕಾವ್ಯ ಪ್ರಕಾಶನ, ಶ್ರೀ ಗಂಗಾಪರಮೇಶ್ವರಿ ಗ್ರಾಮೀಣ ಹಾಗೂ ಕಲ್ಯಾಣಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ಮಕ್ಕಳ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು.
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸುವುದರಿಂದ ಸಾಧಿಸುವ ಛಲ, ಸ್ಪಷ್ಟ ಗುರಿ ಸಿಗಲಿದೆ ಎಂದ ಅವರು, ವಿದ್ಯಾರ್ಥಿಗಳು ಇತಿಹಾಸ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಶಿಕ್ಷಕರು ವಿದ್ಯಾರ್ಥಿಗಳಿಗೆ ಪಠ್ಯದ ಜತೆ ಸ್ಥಳೀಯ ಇತಿಹಾಸವನ್ನು ತಿಳಿಸುತ್ತ ಬೋಧನೆ ಮಾಡಿದರೆ, ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಮೂಡುತ್ತದೆ ಎಂದರು.
ಅಧ್ಯಕ್ಷತೆವಹಿಸಿದ್ದ ಮುರಾರ್ಜಿ ದೇಸಾಯಿ ಶಾಲೆ ಪ್ರಾಚಾರ್ಯ ಎಸ್.ಸಿ. ಶಿವಕುಮಾರ್ ಮಾತನಾಡಿ, ಶಾಲೆಯಲ್ಲಿ ವ್ಯಕ್ತಿತ್ವ ವಿಕಸನ ಶಿಬಿರ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಹಮ್ಮಿಕೊಳ್ಳುವ ಮೂಲಕ ಮಕ್ಕಳ ಬೌದ್ಧಿಕ ಮಟ್ಟವನ್ನು ಹೆಚ್ಚಿಸಲಾಗುತ್ತ್ತಿದೆ ಎಂದರು.
ಕ್ವಿಜ್‌ನಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕ ಕೋಗಳಿ ಸುರೇಶ, ಕೂಡ್ಲಿಗಿ ನಾಗರಾಜ್, ಬಿ.ಎಂ. ಸುನೀತಾ, ಡಿ. ಕೊಟ್ರೇಶ, ರುಕ್ರನಾ, ನಾಗಭೂಷಣ, ತಳವಾರ ಉಮೇಶ, ಎ.ವಿ. ಸುರೇಶ, ಶಿವಕುಮಾರ್, ಎಂ. ಸಿದ್ದೇಶ, ಹೊನ್ನೂರು ಸಾಬ್, ಬಿ.ಮಂಜುನಾ ಇತರರಿದ್ದರು.