ವಿದ್ಯಾರ್ಥಿಗಳೇ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಿ

9nrp 2 (1)
Published on

ಎನ್.ಆರ್.ಪುರ: ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಮೌಂಟ್ ಕಾರ್ಮೆಲ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ಸಿಸ್ಟರ್ ಉಷಾ ಹೇಳಿದರು.

ಮೆಣಸೂರು ಗ್ರಾಮದಲ್ಲಿರುವ ಮೌಂಟ್ಕಾರ್ಮೆಲ್ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಬೀಳ್ಕೊಡಿಗೆ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಸರಿಯಾದ ಮಾರ್ಗದ ಆಯ್ಕೆ ಮಾಡಿಕೊಂಡರೆ ಸರಿಯಾದ ಸಮಯದಲ್ಲಿ ಗುರಿ ತಲುಪಲು ಸಾಧ್ಯ. ಯಶಸ್ಸನ್ನು ಸಾಧಿಸಲು ಕಾಲೇಜು ಹಂತದಲ್ಲಿ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಎಂದರು.

ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಸ್ವಪ್ನ ಹೆಗ್ಡೆ ಮಾತನಾಡಿ, ವಿದ್ಯಾರ್ಥಿಗಳು ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು. ಮಾನಸಿಕವಾಗಿ ಸ್ಥಿರತೆ ಸಾಧಿಸಿದರೆ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಸಾಮರ್ಥ್ಯವಿದ್ದು ಅದನ್ನು ಸಮರ್ಪಕವಾಗಿ ಬಳಸಿಕೊಂಡರೆ ಯಶಸ್ಸು ಸಾಧಿಸಬಹುದು. ತಪ್ಪುಗಳನ್ನು ಸರಿಪಡಿಸಿಕೊಂಡು ಸಮಾಜಕ್ಕೆ ಉತ್ತಮ ಆಸ್ತಿಯಾಗಬೇಕು ಎಂದರು.

ಅರ್ಥಶಾಸ್ತ್ರ ಉನ್ಯಾಸಕ ನಾಗರಾಜ್, ವ್ಯವಹಾರ ಅಧ್ಯಯನ ವಿಭಾಗದ ಉಪನ್ಯಾಸಕ ಅರವಿಂದ್, ಆಲಂದೂರು ನಂದಿನಿ, ಐ.ಎಂ.ರಾಜೀವ ಮಾತನಾಡಿದರು. ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು ಅಂಕಪಡೆದ ರಿತಿನ್ ಕೆ ಅಲೆಕ್ಸ್‌ಗೆ ಕಾಲೇಜಿನ ಹಳೇ ವಿದ್ಯಾರ್ಥಿನಿ ಟಿನೂ ಸ್ಮಾರಕ ನಗದು ಬಹುಮಾನ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳಾದ ದರ್ಶನಾ, ಬಿಬಿ ಆಯಿಷಾ, ಸುಲೆಮಾನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net