

ಮೈಸೂರು: ಇಡೀ ಜಗತ್ತು ತಿರುಗಿ ನೋಡುವಂತಹ ಆಯುರ್ವೇದ ಪದ್ಧತಿಯನ್ನು ಕಂಡುಹಿಡಿದಿರುವ ಕೀರ್ತಿ ಭಾರತಕ್ಕೆ ಸಲ್ಲುತ್ತದೆ ಎಂದು ಆಯುಷ್ ಇಲಾಖೆ ನಿರ್ದೇಶಕಿ ಮೀನಾಕ್ಷಿ ನೇಗಿ ತಿಳಿಸಿದರು.
ಜೆಎಸ್‌ಎಸ್ ಆಯುರ್ವೇದ ಮಹಾವಿದ್ಯಾಲಯದಿಂದ ಆಲನಹಳ್ಳಿ ಬಡಾವಣೆಯಲ್ಲಿನ ಮಹಾವಿದ್ಯಾಲಯದ ಕಾಲೇಜು ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಪದವೀಧರರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಈ ಕೀರ್ತಿಯನ್ನು ಹೇಗೆ ಮುಂದುವರಿಸಿಕೊಂಡು ಹೋಗುತ್ತೇವೆ ಎಂಬುದು ಇಂದು ಪದವಿ ಪಡೆದಿರುವ ವೈದ್ಯರಿಗೆ ಬಿಟ್ಟದ್ದು ಎಂದು ಹೇಳಿದರು.
ಚೀನಾ ದೇಶ ತನ್ನ ಸಾಂಪ್ರದಾಯಿಕ ಔಷಧೀಯ ಪದ್ಧತಿಯನ್ನು ಬೆಳೆಸಿರುವ ರೀತಿ ಅನುಕರಣೀಯ. ಅವರನ್ನು ನೋಡಿ ನಾವು ಕಲಿ ಯಬೇಕಾದದ್ದು ಬಹಳಷ್ಟಿದೆ. ಅವರು ತಮ್ಮ ಔಷಧೀಯ ಪದ್ಧತಿಯನ್ನು ಇಡೀ ಜಗತ್ತಿಗೆ ಪರಿಚಯಿಸಿ ಅದರಲ್ಲೇ ಹೆಚ್ಚು ಸಂಶೋಧನೆ ಗಳನ್ನು ಮಾಡಿ ಬೆಳೆಸಿದ್ದಾರೆ. ಈ ಕಾರಣಕ್ಕಾಗಿ 2015ರಲ್ಲಿ ಚೀನಾ ಮಹಿಳೆಯೊಬ್ಬಳಿಗೆ ವೈದ್ಯಕೀಯ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ಬಂದಿದೆ. ಇದು ಅವರ ಪರಿಶ್ರಮಕ್ಕೆ ಸಾಕ್ಷಿ ಎಂದರು.
ಇದೇ ವೇಳೆ ಒಟ್ಟು 85 ಪದವಿ ಮತ್ತು 22 ಸ್ನಾತಕೋತ್ತರ ಪದವೀಧರರಿಗೆ ಅಧಿಕೃತ ಪದವಿ ಪತ್ರಗಳನ್ನು ವಿತರಿಸಲಾಯಿತು. ಸ್ನಾತ ಕೋತ್ತರ ಪದವಿಯ 14 ವಿದ್ಯಾರ್ಥಿಗಳು ಹಾಗೂ ಪದವಿಯ 9 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ಚಿನ್ನದ ಪದಕ ಗಳನ್ನು ಪಡೆದುಕೊಂಡರು. ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ್, ಮುಕ್ತ ವಿವಿ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್, ಕಾಲೇಜಿನ ನಿರ್ದೇಶಕ ಆರ್.ಮಹೇಶ್, ಕಾಲೇಜಿನ ವಿಶ್ರಾಂತ ನಿರ್ದೇಶಕ ಚೆನ್ನಬಸಪ್ಪ ಇತರರಿದ್ದರು.