

ಮೈಸೂರು: ನಗರದ ಹೆಬ್ಬಾಳಿನಲ್ಲಿ ಇರುವ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದಲ್ಲಿ ಗುರುವಾರ ವ್ಯಸನದಿಂದಾಗುವ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಂತ ಜೋಸೆಫ್ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಾದ ದೀಕ್ಷಿತ್, ತೇಜಸ್, ಪೂರ್ವ, ನಿಶಾಂತ್, ಶ್ರೇಯಸ್, ಸೂರಜ್, ಜೇಜಶ್ರೀ, ಪ್ರಿಯಾ, ತ್ರಿಷಾ, ದೀಪಿಕಾ ಅವರು, ಕುಡಿತದಿಂದಾಗುವ ಅನಾಹುತಗಳ ಬಗ್ಗೆ ಮನೋಜ್ಞಾವಾಗಿ ಅಭಿನಯ ಮಾಡಿ ನೋಡುಗರ ಕಣ್ಣು ತೆರೆಸಿದರು.
ಕುಡಿತ ಕೇವಲ ವ್ಯಕ್ತಿಯನ್ನು ಮಾತ್ರ ಬಲಿ ಪಡೆಯುವುದಿಲ್ಲ. ಅದರ ಜತೆಗೆ ಅವರ ಅವಲಂಬಿರನ್ನೂ ಕೂಡ ಬಲಿ ಪಡೆಯುತ್ತದೆ. ಕುಟುಂಬದಲ್ಲಿ ನೆಮ್ಮದಿ ಹಾಳು ಮಾಡುತ್ತದೆ. ಬೆಳೆಯುವ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕುಡಿದು ವಾಹನ ಚಲಾಯಿಸುವುದರಿಂದ ಸರಿಯಾಗಿ ವಾಹನ ಚಾಲನೆ ಮಾಡುವವರೂ ಕೂಡ ತೊಂದರೆಗೆ ಒಳಪಡುತ್ತಾರೆ. ಯುವ ಜನಾಂಗಕ್ಕೆ ಆಕರ್ಷಣೆ ಹೆಚ್ಚು, ಕೆಟ್ಟವರ ಸಹವಾಸದಿಂದ ಧೂಮಪಾನ, ಮದ್ಯಪಾನ, ಗಾಂಜಾದಂತಹ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ ಎಂಬುದರ ಕುರಿತು ಅರಿವು ಮೂಡಿಸಿದರು.
ಕಾಂಗ್ರೆಸ್ ಮುಖಂಡ ಆರ್.ರವಿ ಮಾತನಾಡಿ, ಕುಡಿತ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ವ್ಯಕ್ತಿಯ ಮಾನಸಿಕ ಸ್ಥಿತಿಯನ್ನು ಬದಲಾಯಿಸುತ್ತದೆ ಖಿನ್ನತೆ, ಮಾನಸಿಕ ಸಮಸ್ಯೆಗೆ ಕಾರಣವಾಗುತ್ತದೆ. ಮದ್ಯಪಾನ, ತಂಬಾಕು, ಗಾಂಜಾ ಸೇರಿದಂತೆ ಇತರೆ ಮಾದಕ ವಸ್ತುಗಳು ಸಮಾಜದ ಅಭಿವೃದ್ಧಿಗೆ ಮಾರಕವಾಗಿದೆ. ಈ ಬಗ್ಗೆ ಪ್ರತಿಯೊಬ್ಬರು ಎಚ್ಚೆತ್ತುಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಕ್ಕಳ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷೆ ಮಂಜುಳಾ, ಸಂತ ಜೋಸೆಫ್ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಪಿ.ಭವ್ಯಶ್ರೀ, ಸಂಸ್ಥೆಯ ವ್ಯವಸ್ಥಾಪಕ ಮಹೇಶ್, ಸಹ ವ್ಯವಸ್ಥಾಪಕ ಮಂಜುನಾಥ್, ಸಿಬ್ಬಂದಿ ಆನಂದ್, ಉಷರಾಣಿ, ರಾಧಿಕಾ, ಆರ್ಚಿತ್‌ರಾಮ್ ಇತರರು ಇದ್ದರು.