ವಿದ್ಯಾರ್ಥಿಗಳು ಸಂವಿಧಾನದ ಅಧ್ಯಯನ ಮಾಡಲಿ

03-DVD-1
Published on

ದೇವದುರ್ಗ: ಭಾರತದ ಸಂವಿಧಾನ ಸರ್ವ ಜನಾಂಗ ಅಭಿವೃದ್ಧಿ ಪಥದತ್ತ ಸಾಗುವಂತೆ ಮಾಡುವ ಶ್ರೇಷ್ಠ ಗ್ರಂಥವಾಗಿದೆ. ಇಂತಹ ಮಹಾನ್ ಗ್ರಂಥವನ್ನು ನಾವೆಲ್ಲ ಶ್ರದ್ಧೆಯಿಂದ ಅಧ್ಯಯನ ಮಾಡಬೇಕು. ಈ ಮೂಲಕ ಅದರ ಸಮರ್ಪಕ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿ ಮಂಜುಳಾ ಅಸುಂಡಿ ಹೇಳಿದರು.

ಮಸರಕಲ್ ಮುರಾರ್ಜಿ ವಸತಿ ಶಾಲೆಯಲ್ಲಿ ಸಮತಾ ಗ್ರಾಮೀಣ ಅಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆಯಿಂದ ಆಯೋಜಿಸಿದ್ದ ವಿದ್ಯಾರ್ಥಿಗಳ ನಡೆ, ಸಂವಿಧಾನದ ಕಡೆ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ಸಂವಿಧಾನದಿಂದ ಬಡವರು, ಶೋಷಿತರು, ಮಹಿಳೆಯರಿಗೆ ಸೌಲಭ್ಯಗಳು ದೊರೆದು ಬದುಕು ಹಸನುಗೊಂಡಿದೆ. ಸಂವಿಧಾನವನ್ನು ವಿದ್ಯಾರ್ಥಿ ದೆಸೆಯಿಂದಲೇ ಅಧ್ಯಯನ ಮಾಡಬೇಕು. ಪ್ರತಿಯೊಬ್ಬರಿಗೂ ಸಂವಿಧಾನದ ತಿಳಿವಳಿಕೆ ಅಗತ್ಯ ಎಂದರು.

ಎಂಆರ್‌ಎಚ್‌ಎಸ್ ಅಧ್ಯಕ್ಷ ಶಿವರಾಯ ಅಕ್ಕರಕಿ ಉಪನ್ಯಾಸ ನೀಡಿ, ವಿದ್ಯಾರ್ಥಿ ಮಟ್ಟದಲ್ಲೇ ವೈಚಾರಿಕ ಸಂದೇಶಗಳ ಅರಿವು ಹಾಗೂ ಅಧ್ಯಯನ ನಡೆದಾಗ ಡಾ.ಬಿ.ಆರ್.ಅಂಬೇಡ್ಕರ್ ಅವರ ಕನಸು ಹಾಗೂ ಆಶಯಗಳು ಸಾಕಾರಗೊಳ್ಳಲು ಸಾಧ್ಯ. ದಮನಿತರ ಕಲ್ಯಾಣ, ಮಹಿಳೆಯರ ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ, ಸಮಾನತೆ, ಶಿಕ್ಷಣ, ಆರ್ಥಿಕ, ಧಾರ್ಮಿಕ ಸ್ವಾತಂತ್ರ್ಯ ಸೇರಿ ಹಲವು ಕನಸುಗಳನ್ನು ಇಟ್ಟುಕೊಂಡು ಸಂವಿಧಾನ ಜಾರಿಗೊಳಿಸಲಾಗಿದೆ ಎಂದರು.
ವಿದ್ಯಾರ್ಥಿಗಳು ಬುದ್ಧ, ಬಸವ, ಅಂಬೇಡ್ಕರ್ ಅವರಂತಹ ಮಹನೀಯರ ಸಂದೇಶಗಳನ್ನು ವೈಚಾರಿಕ ನೆಲೆಗಟ್ಟಿನ ಮೇಲೆ ಅಧ್ಯಯನ ಮಾಡಬೇಕು. ಸಂವಿಧಾನದ ಮೂಲ ಉದ್ದೇಶ ಅರ್ಥೈಸಿಕೊಳ್ಳಬೇಕು. ಮೀಸಲಾತಿಯ ಒಳಮರ್ಮದ ಅರಿವು ಮೂಡಿಸಿಕೊಳ್ಳಬೇಕು. ಮೀಸಲಾತಿ ಮತ್ತು ಜಾತಿ ಸೌಲಭ್ಯ ಪಡೆದು ಉನ್ನತ ಪದವಿ ಪಡೆದವರು ಸಮುದಾಯದ ಕಡೆ ತಿರುಗಿ ನೋಡಬೇಕಾಗಿದೆ ಎಂದು ಶಿವರಾಯ ಅಕ್ಕರಕಿ ತಿಳಿಸಿದರು.

ಪ್ರಾಚಾರ್ಯ ಶರಣಬಸಯ್ಯ ಹಿರೇಮಠ, ಕಾರ್ಯಕ್ರಮದ ಸಂಚಾಲಕ ಬಸವರಾಜ ಬ್ಯಾಗವಾಟ, ದಲಿತ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಮಾಜಿ ಅಧ್ಯಕ್ಷ ಬಸವರಾಜ ಮೇತ್ರಿ, ಪತ್ರಕರ್ತ ನರಸಿಂಗರಾವ್ ಸರ್ಕಿಲ್, ಸುನಂದ ಕುಮಾರ ಬಳೆ, ಶಿಕ್ಷಕರಾದ ಜಟ್ಟೆಪ್ಪ ಅಣಬಿ, ಶಂಕ್ರಮ್ಮ, ಬಸವರಾಜ, ಶ್ರೀನಿವಾಸ, ಶ್ರೀನಾಥ ಜಟ್ನಾಕ್, ಕವಿತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net