

ಬೆಳಗಾವಿ: ರಾಷ್ಟ್ರದ ಶ್ರೇಷ್ಠ ಪ್ರಜೆಗಳಾಗಲು ಸಂವಿಧಾನವು ಪ್ರತಿ ನಾಗರಿಕರಿಗೆ ನೀಡಿದ ಹಕ್ಕು ಮತ್ತು ಜವಾಬ್ದಾರಿಗಳನ್ನು ಅರಿತು ಬದುಕಬೇಕು ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕುಲಪತಿ ಪ್ರೊ.ಕರಿಸಿದ್ದಪ್ಪ ಹೇಳಿದ್ದಾರೆ.
ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇಶವು ನಾಗರಿಕರಿಗೆ ಏನು ಒದಗಿಸಬೇಕು ಹಾಗೂ ಪ್ರಜೆಗಳು ದೇಶದ ಕುರಿತು ಯಾವ ರೀತಿ ನಡೆದುಕೊಳ್ಳಬೇಕು ಎಂಬುದನ್ನು ನ್ಯಾಯಿಕ ವಿಧಾನ ಸೂಚಿಸುತ್ತದೆ. ಈ ಎಲ್ಲ ಅಂಶಗಳನ್ನು ಮಕ್ಕಳಿಗೆ ಮನದಟ್ಟು ಮಾಡಲು ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಶಿಕ್ಷಣ ಸಂಸ್ಥೆಗಳು ಆಯೋಜಿಸಬೇಕು ಎಂದು ಸಲಹೆ ನೀಡಿದರು.
ಗೋಗಟೆ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಡಾ.ಎ.ಬಿ.ಕಾಲಕುಂದ್ರಿಕರ್ ಮಾತನಾಡಿ, ಜಗತ್ತಿನಲ್ಲಿಯೇ ಅತ್ಯಂತ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದ ಸಂವಿಧಾನ ಶ್ರೇಷ್ಠ ಸ್ಥಾನದಲ್ಲಿದೆ. ಬದಲಾಗುತ್ತಿರುವ ಸನ್ನಿವೇಶದಲ್ಲಿ ಇಂದು ವಿದ್ಯಾರ್ಥಿಗಳಲ್ಲಿ ಸಂವಿಧಾನ ರಚನೆ, ಇತಿಹಾಸ ಹಾಗೂ ಅದು ನಾಗರಿಕರಿಗೆ ನೀಡುವ ಹಕ್ಕು-ಕರ್ತವ್ಯಗಳ ಕುರಿತು ತಿಳಿವಳಿಕೆ ನೀಡುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.
ಅಂಬೇಡ್ಕರ್ ಕೊಡುಗೆ ಅನನ್ಯ: ಸುಪ್ರೀಂಕೋರ್ಟ್ ಮಾತ್ರ ಭಾರತೀಯ ಸಂವಿಧಾನದ ವಿಮರ್ಶೆ ಮಾಡಬಹುದು. ಸರ್ಕಾರವು ಸಂವಿಧಾನದ ಅಡಿಯಲ್ಲಿ ಕೆಲಸ ಮಾಡುತ್ತದೆ. ಕೇವಲ ಸಾಮಾಜಿಕ ಮತ್ತು ಧಾರ್ಮಿಕ ಹಕ್ಕುಗಳನ್ನು ಹೇಳದೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳ ನಡುವಿನ ಹಣಕಾಸಿನ ವ್ಯವಹಾರದ ವ್ಯವಸ್ಥೆಯನ್ನೂ ಸಹ ಇದು ವ್ಯಾಖ್ಯಾನಿಸುತ್ತದೆ. ನಾಗರಿಕರಿಗೆ ಸಾಮಾಜಿಕವಾಗಿ ಸ್ವಾತಂತ್ರ್ಯ ಕೊಡುವುದರ ಜತೆಗೆ ಒಬ್ಬರು ಮತ್ತೊಬ್ಬರ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪಕ್ಕೆ ಅವಕಾಶ ನೀಡಿಲ್ಲ. ಇಂತಹ ಶ್ರೇಷ್ಠ ರಾಷ್ಟ್ರಗ್ರಂಥವನ್ನು ನೀಡಿದ ಡಾ. ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಸ್ಮರಣೀಯ ಎಂದು ಹೇಳಿದರು.
ಇದಕ್ಕೂ ಮುನ್ನ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ.ಆನಂದ ದೇಶಪಾಂಡೆ, ಮೌಲ್ಯಮಾಪನ ವಿಭಾಗದ ಕುಲಸಚಿವ ಪ್ರೊ.ಸತೀಶ ಅಣ್ಣಿಗೇರಿ, ಹಣಕಾಸು ವಿಭಾಗದ ಅಧಿಕಾರಿ ಎಂ.ಎ. ಸಪ್ನಾ ಸೇರಿದಂತೆ ಎಲ್ಲ ವಿಭಾಗದ ಮುಖ್ಯಸ್ಥರು ಹಾಗೂ ಉಪನ್ಯಾಸಕರು ಇದ್ದರು. ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಪ್ರೊ.ಅಪ್ಪಾಸಾಬ ಎಲ್.ವಿ. ಕಾರ್ಯಕ್ರಮ ನಿರ್ವಹಿಸಿದರು.