

ಮಹಾಲಿಂಗಪುರ: ಪಟ್ಟಣದ ಕೆಎಲ್‌ಇ ಸಂಸ್ಥೆಯ ಪದವಿ ಕಾಲೇಜಿನ ಬಿಎ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಹತ್ತಿರದ ಯಾವುದಾದರೂ ಅಸಹಾಯಕರ ಆಶ್ರಮಕ್ಕೆ ಭೇಟಿ ನೀಡಿ ಅಧ್ಯಯನ ಮಾಡಿ ವರದಿ ಒಪ್ಪಿಸಲು ಕಾಲೇಜಿನಲ್ಲಿ ಉಪನ್ಯಾಸಕರು ಪ್ರೊಜೆಕ್ಟ್ ಅಸೈನ್ಮೆಂಟ್ ಕೊಟ್ಟಿದ್ದರು.
ಭಾನುವಾರ ಅನಾಥಾಶ್ರಮಕ್ಕೆ ವರದಿ ತರಲು ವಿದ್ಯಾರ್ಥಿಗಳು ಪೆನ್ ಮತ್ತು ಪೇಪರ್ ಹಿಡಿದು ಹೋಗಬಹುದಿತ್ತು. ಆದರೆ, ಅನಾಥಾಶ್ರಮಕ್ಕೆ ಬರಿಗೈಯಿಂದ ಹೋಗುವುದು ಸರಿಯಲ್ಲವೆಂದು ಸ್ವಯಂ ಪ್ರೇರಣೆಯಿಂದ ಪಾಲಕರ, ಶಿಕ್ಷಕರ ಮತ್ತು ಸಹಪಾಠಿಗಳ ಔದಾರ್ಯದ ಹಣ ಸೇರಿಸಿದರು. ಮುಧೋಳದ ವಿಜಯ ಅನಾಥಾಶ್ರಮಕ್ಕೆ ದೂರವಾಣಿಯಲ್ಲಿ ಸಂಪರ್ಕಿಸಿ ಅಗತ್ಯ ಸಾಮಗ್ರಿಗಳ ಪಟ್ಟಿ ತರಿಸಿದ್ದಾರೆ. ಪೇಟೆಯಲ್ಲಿ ಎಲ್ಲ ಸಾಮಗ್ರಿಗಳನ್ನು ಖರೀದಿಸಿ ಕಾರ್‌ನಲ್ಲಿ ಅನಾಥಾಶ್ರಮಕ್ಕೆ ತೆರಳಿ ಎಲ್ಲರಿಗೂ ವಿತರಿಸಿ ಮಕ್ಕಳ ಮುಖದಲ್ಲಿನ ಖುಷಿ ನೋಡಿ ತಾವೂ ಸಂಭ್ರಮಿಸಿದ್ದಾರೆ.
ಸಂಗ್ರಹಿಸಿದ ಮೊತ್ತಕ್ಕೆ ಇನ್ನಷ್ಟು ಕುಕ್ಕರ್, ಬಕೆಟ್, ಬುಟ್ಟಿ, ಬಟ್ಟಲು, ಪ್ಲೇಟ್, ಪೊರಕೆ, ಜಗ್, ಮ್ಯಾಟ್, ವೈಪರ್, ಸ್ವೀಪರ್, ಸಕ್ಕರೆ, ಖಾರ, ಸಾಬೂನ್ ಪುಡಿ, ಶೇಂಗಾ, ಅಡುಗೆ ಎಣ್ಣೆ , ಪೇಪರ್ ಪ್ಯಾಡ್, ಪಿನಾಯಿಲ್ ಖರೀದಿಸಿದ್ದಾರೆ. ಸಂಗ್ರಹವಾಗಿದ್ದ 6416 ರೂಗಳಿಗೆ ವೈಯಕ್ತಿಕ ಹಣವನ್ನೂ ಸೇರಿಸಿ ಒಟ್ಟು 8 ಸಾವಿರ ರೂ. ಸಾಮಗ್ರಿ ಕೊಂಡೋಯ್ದಿದ್ದಾರೆ. ಕೆಲ ವಿದ್ಯಾರ್ಥಿಗಳು ವೈಯಕ್ತಿಕವಾಗಿ ಟೂತ್ ಬ್ರಶ್, ಬಿಸ್ಕೇಟ್, ಪೆನ್ಸಿಲ್, ರಬ್ಬರ್, ಕರವಸಗಳನ್ನೂ ನೀಡಿದ್ದಾರೆ. ವಿದ್ಯಾರ್ಥಿಯೊಬ್ಬ ತಮ್ಮ ತಾಯಿಯ ಕೈಯಿಂದ ಶೇಂಗಾ ಉಂಡಿ ಮಾಡಿಸಿಕೊಂಡು ಅನಾಥ ಮಕ್ಕಳಿಗೆ ತಿನ್ನಿಸಿ ಸಂಭ್ರಮಿಸಿದ್ದಾನೆ.
ಉಪನ್ಯಾಸಕ ಶಿವಲಿಂಗ ಸಿದ್ನಾಳ ಮಾರ್ಗದರ್ಶನದಲ್ಲಿ ಫಾತಿಮಾ ಯಾದವಾಡ, ಮುತ್ತುರಾಜ ಸಿದ್ದಾಪುರ, ಸಂಗೀತಾ ಗೌಂಡಿ, ಕಲ್ಪನಾ ಪಾಟೀಲ, ಆಲಿಯಾ ಜಮಾದಾರ, ಕೀರ್ತಿ ಮೋಡೆ, ಸಿಮ್ರಾನ್ ಕರೋಶಿ, ಪ್ರೀತಿ ನಿಪನಾಳ, ಶಿಲ್ಪಾ ಜಾಂಗನೂರ, ಸುರೇಖಾ ಪೋತದಾರ, ಸವಿತಾ ಬನಾಜ, ಬಸವರಾಜ ಕಮತಗಿ, ಸಂತೋಷ ಬ್ಯಾಕೋಡ, ಗಿರೀಶ ಶಿರೋಳ, ರಾಹುಲ್ ಜಾಧವ, ಮಹಾದೇವ ದುರದುಂಡಿ ವರದಿ ಒಪ್ಪಿಸಿದವರು.