ಬಸ್ ನಿಲುಗಡೆಗೆ ಆಗ್ರಹಿಸಿ ರಸ್ತೆ ಸಂಚಾರ ತಡೆದ ವಿದ್ಯಾರ್ಥಿಗಳು

Dhavalagi
ಢವಳಗಿ ಗ್ರಾಮದ ಹೊರವಲಯದ ಹೆಸ್ಕಾಂ ಹತ್ತಿರ ಬಸ್ ನಿಲುಗಡೆಗೆ ಆಗ್ರಹಿಸಿ ಆರ್‌ಎಂಎಸ್ ವಸತಿ ನಿಲಯದ ವಿದ್ಯಾರ್ಥಿಗಳು ವಿಜಯಪುರ-ಮುದ್ದೇಬಿಹಾಳ ರಸ್ತೆಯಲ್ಲಿ ಬಸ್ ತಡೆದು ಪ್ರತಿಭಟನೆ ನಡೆಸಿದರು.
Published on

ಢವಳಗಿ (ಮುದ್ದೇಬಿಹಾಳ): ಗ್ರಾಮದ ಹೊರವಲಯದ ಹೆಸ್ಕಾಂ ಬಳಿ ಸಾರಿಗೆ ಬಸ್‌ಗಳ ನಿಲುಗಡೆಗೆ ಆಗ್ರಹಿಸಿ ಆರ್‌ಎಂಎಸ್ ವಸತಿ ನಿಲಯದ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶುಕ್ರವಾರ ಬೆಳಗ್ಗೆ ವಿಜಯಪುರ-ಮುದ್ದೇಬಿಹಾಳ ಮುಖ್ಯ ರಸ್ತೆಯಲ್ಲಿ ಸಾರಿಗೆ ಬಸ್ ತಡೆದು ಪ್ರತಿಭಟನೆ ನಡೆಸಿದರು.

ವಿಜಯಪುರದಿಂದ ಮುದ್ದೇಬಿಹಾಳಕ್ಕೆ ತೆರಳುವ ಸಾಕಷ್ಟು ಬಸ್‌ಗಳು ನಿತ್ಯ ವಸತಿ ನಿಲಯದ ಮಾರ್ಗವಾಗಿ ಹೋಗುತ್ತವೆ. ಈ ವಸತಿ ನಿಲಯದಿಂದ ಮುದ್ದೇಬಿಹಾಳಕ್ಕೆ ನಿತ್ಯ ಹೈಸ್ಕೂಲ್ ಹಾಗೂ ಕಾಲೇಜ್‌ಗಾಗಿ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೋಗುತ್ತೇವೆ. ಬೆಳಗ್ಗೆ ಹಾಗೂ ಸಂಜೆ ಬಸ್‌ಗಳ ನಿಲುಗಡೆಗೆ ವಿನಂತಿಸಿದರೂ ನಿಲ್ಲಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಢವಳಗಿ ಗ್ರಾಮದಿಂದ ವಸತಿ ನಿಲಯ ಒಂದೂವರೆ ಕಿ.ಮೀ. ದೂರವಿದೆ. ಅಲ್ಲಿ ಬಸ್ ನಿಲುಗಡೆ ಮಾಡಲಾಗುತ್ತದೆ. ನಿತ್ಯ ಅಲ್ಲಿವರೆಗೆ ನಡೆದುಕೊಂಡು ಹೋಗಿ ಬಸ್ ಹಿಡಿಯುವುದು ತುಂಬಾ ತೊಂದರೆಯಾಗುತ್ತದೆ. ಅಷ್ಟರಲ್ಲಿ ಒಂದೆರಡು ಕ್ಲಾಸ್‌ಗಳು ತಪ್ಪುತ್ತವೆ. ಇದರಿಂದ ಅಧ್ಯಯನಕ್ಕೆ ತೊಂದರೆಯಾಗುತ್ತದೆ. ಕೂಡಲೇ ಈ ಸಮಸ್ಯೆ ಬಗೆಹರಿಸಬೇಕು. ವಸತಿ ನಿಲಯದ ಬಳಿ ವಿನಂತಿ ಮೇರೆಗೆ ನಿಲುಗಡೆ ಎಂಬ ಫಲಕ ಅಳವಡಿಸಲಾಗಿದ್ದರೂ ಬಸ್ ನಿಲ್ಲಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಹರಿಹಾಯ್ದರು.
ವಿಚಿತ್ರವೆಂದರೆ ವಸತಿ ನಿಲಯದ ಪಕ್ಕದಲ್ಲೇ ಕಸ್ತೂರಬಾ ಗಾಂಧಿ ಶಾಲೆ ಇದೆ. ಈ ಶಾಲೆಗೆ ಬರುವ ಶಿಕ್ಷಕರಿಗಾಗಿ ಇದೇ ಸ್ಥಳದಲ್ಲಿ ಬಸ್ ನಿಲ್ಲಿಸಲಾಗುತ್ತದೆ. ವಿದ್ಯಾರ್ಥಿಗಳು ವಿನಂತಿಸಿದರೆ ಚಾಲಕರು ನಿಲ್ಲಿಸುತ್ತಿಲ್ಲ ಎಂದು ಅಳಲು ತೋಡಿಕೊಂಡರು. ನಾವೆಲ್ಲ ವಿದ್ಯಾರ್ಥಿ ಬಸ್ ಪಾಸ್ ಪಡೆದಿದ್ದೇವೆ ಎಂಬ ಕಾರಣಕ್ಕೆ ನಿಲ್ಲಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಗೋಳಿಟ್ಟರು.

ಪ್ರತಿಭಟನೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮುದ್ದೇಬಿಹಾಳ ಸಾರಿಗೆ ಘಟಕ ನಿಯಂತ್ರಣಾಧಿಕಾರಿ ಡಿ.ಎನ್.ಬಿಳೇಭಾವಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಪರಿಸ್ಥಿತಿ ತಿಳಿಗೊಳಿಸಿದರು. ಎಲ್ಲ ಬಸ್‌ಗಳ ನಿಲುಗಡೆಗೂ ಆದೇಶಿಸಲಾಗಿದ್ದು, ಯಾವುದೇ ಬಸ್ ನಿಲ್ಲಿಸದಿದ್ದರೆ ಕೂಡಲೇ ತಿಳಿಸುವಂತೆ ವಿದ್ಯಾರ್ಥಿಗಳಿಗೆ ಮೊಬೈಲ್ ನಂಬರ್ ನೀಡುತ್ತಿದ್ದಂತೆ ಮಕ್ಕಳು ಪ್ರತಿಭಟನೆಯಿಂದ ಹಿಂದೆ ಸರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net