ವಿದ್ಯಾರ್ಥಿಗಳೇ ಭವ್ಯ ಭಾರತದ ಆಧಾರ

30 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಶಿಕ್ಷಣ ಮಾನವ ಸಂಸ್ಕೃತಿಯ ಪ್ರತಿಬಿಂಬ. ಅದರಿಂದ ಅಂತರಂಗದ ಸಂಸ್ಕೃತಿ ಅರಳುವುದು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು ನರೇಂದ್ರದ ಸರ್ಕಾರಿ ಪ್ರೌಢಶಾಲೆ ಸಹಯೋಗದಲ್ಲಿ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಏರ್ಪಡಿಸಿದ್ದ ಅಧ್ಯಯನದಲ್ಲಿ ಏಕಾಗ್ರತೆ ಸಾಧಿಸುವುದು ಹೇಗೆ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಪ್ರತಿ ವ್ಯಕ್ತಿಯ ಜೀವನದಲ್ಲಿ ಅತ್ಯಂತ ಮಹತ್ವದ್ದಾಗಿದೆ. ನಿರ್ದಿಷ್ಟ ಗುರಿ ಹಾಗೂ ಸಾಧಿಸುವ ಛಲದಿಂದ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಒಳ್ಳೆ ಶಿಕ್ಷಣ ಪಡೆದು ತಂದೆ, ತಾಯಿ ಶಾಲೆಗೆ ಕೀರ್ತಿ ತರಬೇಕು. ದೇಶದ ಉನ್ನತಿ ನಿಮ್ಮನ್ನೇ ಅವಲಂಬಿಸಿದೆ. ವಿದ್ಯಾರ್ಥಿಗಳೇ ಭವ್ಯ ಭಾರತದ ಆಧಾರ ಸ್ತಂಭ ಎಂದರು.
ಡಿಮ್ಹಾನ್ಸ ಮನೋ ವೈದ್ಯಕೀಯ ಸಮಾಜ ಕಾರ್ಯಕರ್ತ ಪ್ರಶಾಂತ ಪಾಟೀಲ ಏಕಾಗ್ರತೆ ಕುರಿತು ಉಪನ್ಯಾಸ ನೀಡಿ, ವಿದ್ಯಾರ್ಥಿಗಳಿಗೆ ತಮ್ಮ ಶಕ್ತಿಯಲ್ಲಿ ನಂಬಿಕೆ ಇರಬೇಕು. ಅದುವೇ ಆತ್ಮವಿಶ್ವಾಸ. ಓದಿನಲ್ಲಿ ಶ್ರದ್ಧೆ, ಬದ್ಧತೆ ಇರಲಿ. ವಿನಾಕಾರಣ ಪರೀಕ್ಷೆ ಬಗ್ಗೆ ಭಯ, ಆತಂಕ, ನಕಾರಾತ್ಮಕ ಭಾವನೆ ಬೇಡ ಎಂದರು.
ಗ್ರಾಮೀಣ ಕ್ಷೇತ್ರ ಸಮನ್ವಯಾಧಿಕಾರಿ ಎನ್.ಎಸ್. ದಫೇದಾರ ಮಾತನಾಡಿ, ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ಗೃಹ ವೇಳಾಪಟ್ಟಿ ಸಿದ್ಧಗೊಳಿಸಬೇಕು. ಗುರುಗಳ ಮಾರ್ಗದರ್ಶನ ಗುರಿಯೊಂದಿಗೆ ಅಧ್ಯಯನಶೀಲರಾಗಬೇಕು ಎಂದರು. ಶಿಕ್ಷಣ ಸಂಯೋಜಕ ಟಿ.ಎನ್. ಸೈಯದ್ ಪರೀಕ್ಷಾ ಸಿದ್ಧತೆ ಬಗ್ಗೆ ಅಗತ್ಯ ಸಲಹೆ ನೀಡಿದರು. ಬಸವರಾಜ ಹುಂಬೇರಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗ್ರಾಪಂ ಅಧ್ಯಕ್ಷ ನಾಗಪ್ಪ ಹಟ್ಟಿಹೊಳಿ, ಮುಖ್ಯಾಧ್ಯಾಪಕ ಜಗದೀಶ ಬಳೆಗಾರ, ಬಸಪ್ಪ ತೇಗೂರ, ಶ್ರೀದೇವಿ ಕುಸುಗಲ್, ರೇವಣಸಿದ್ದಪ್ಪ, ಅನಿತಾ ಹೊನ್ನವಾಡ, ಇತರರು ಇದ್ದರು.
ಜಯಂತ ಗಾಮನಗಟ್ಟಿ ಸ್ವಾಗತಿಸಿದರು. ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಲಕ್ಷ್ಮೀ ಅಂಬಿಗೇರ ನಿರೂಪಿಸಿದರು. ಎಂ.ವೈ. ಬಡಿಗೇರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net