ಕನ್ನಡ ಬೆಳೆಸುವ ಹೊಣೆ ವಿದ್ಯಾರ್ಥಿಗಳದ್ದು

Bel_Kannada
Published on

ಬೆಳ್ತಂಗಡಿ: ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಬೆಳ್ತಂಗಡಿ, ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಆಶ್ರಯದಲ್ಲಿ, ಕವಿ ಶಂಕರ್ ಎನ್.ತಾಮನ್ಕರ್ ಮುಂಡಾಜೆ ಅವರ ಸೀತಾ ರಾಮಾಯಣ ಮತ್ತು ಮಕರಂದ ಕವನ ಸಂಕಲನಗಳ ಲೋಕಾರ್ಪಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮುಂಡಾಜೆಯಲ್ಲಿ ಭಾನುವಾರ ನಡೆಯಿತು.

ಕಸಾಪ ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ ಕವನ ಸಂಕಲನ ಲೋಕಾರ್ಪಣೆಗೊಳಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಕನ್ನಡದ ರಥವನ್ನು ಎಳೆಯಬೇಕಾದವರು ವಿದ್ಯಾರ್ಥಿಗಳು. ಈ ನಿಟ್ಟಿನಲ್ಲಿ ಕಸಾಪ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂದರು.

ಕಸಾಪ ತಾಲೂಕು ಘಟಕದ ಅಧ್ಯಕ್ಷ ಡಿ.ಯದುಪತಿ ಗೌಡ ಮಾತನಾಡಿ ಅಧ್ಯಕ್ಷತೆ ವಹಿಸಿದ್ದರು. ಗಣಪತಿ ಭಟ್ ಕುಳಮರ್ವ ಕೃತಿ ಮತ್ತು ಕೃತಿಕಾರರ ಪರಿಚಯ ನೀಡಿದರು. ಸ್ವಾತಿ ಎಸ್.ತಾಮನ್ಕರ್ ಉಪಸ್ಥಿತರಿದ್ದರು.

ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಸಂಸ್ಥಾಪಕ ನಾಮದೇವ ರಾವ್, ಹಿರಿಯ ಮುತ್ಸದ್ದಿ ಅಡೂರು ವೆಂಕಟ್ರಾಯ, ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದ ಜಯರಾಮ ಕೆ, ಬಡಗುತಿಟ್ಟಿನ ಖ್ಯಾತ ಮದ್ದಲೆ-ಚೆಂಡೆ ವಾದಕ ಅನಂತ ಪದ್ಮನಾಭ ಫಾಟಕ್, ವಿದುಷಿ ಅನಸೂಯ ಫಾಟಕ್, ತೆಂಕುತಿಟ್ಟಿನ ಖ್ಯಾತ ಮದ್ದಲೆ ಚೆಂಡೆವಾದಕ ಶಿತಿಕಂಠ ಶೆಂಡ್ಯೆ, ಕಸೂತಿ ವಿನ್ಯಾಸಗಾರ ಎ.ಆರ್.ಗೋಖಲೆ, ಹವ್ಯಾಸಿ ರಂಗ ಕಲಾವಿದ ವೆಂಕಟಗಿರಿ ಹೊಳ್ಳ ಹಾಗೂ ಸಮಾಜಸೇವಕ ಸಚಿನ್ ಭಿಡೆ ಅವರನ್ನು ಸನ್ಮಾನಿಸಲಾಯಿತು.

ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಅಧ್ಯಕ್ಷ ಶೀನಪ್ಪ ಗೌಡ ಸ್ವಾಗತಿಸಿದರು. ಪತ್ರಕರ್ತ ಅಶ್ರಫ್ ಆಲಿಕುಂಙ ಕಾರ್ಯಕ್ರಮ ನಿರೂಪಿಸಿದರು. ಶಂಕರ್ ಎನ್.ತಾಮನ್ಕರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net