ವಿದ್ಯಾರ್ಥಿಗಳು ಮಠದ ಪರಂಪರೆಯ ಭಾಗ ; ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಎನ್.ಭೃಂಗೀಶ್ ಬಣ್ಣನೆ

03TMK_brungesh
Published on

ತುಮಕೂರು: ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಎನ್.ಭೃಂಗೀಶ್ ಭಾನುವಾರ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಡಾ.ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆದು, ಶ್ರೀ ಸಿದ್ದಲಿಂಗ ಸ್ವಾಮೀಜಿ ಆಶೀರ್ವಾದ ಪಡೆದರು.

ನಂತರ ಸುದ್ದಿಗಾರರ ಜತೆ ಮಾತನಾಡಿ, ನಾನು ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿ, ಮಾಧ್ಯಮಿಕ ಶಿಕ್ಷಣದಿಂದ ಪದವಿ ಪೂರ್ವ ಶಿಕ್ಷಣದವರೆಗೆ ಶ್ರೀಮಠದಲ್ಲೇ ಓದಿದ್ದೇನೆ. ನಂತರ ಪದವಿ ಶಿಕ್ಷಣಕ್ಕಾಗಿ ಬೆಂಗಳೂರು ವಿವಿ ಮತ್ತು ಕಾನೂನು ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಅಭ್ಯಾಸ ಮಾಡಿದೆ ಎಂದು ಸ್ಮರಿಸಿದರು.

ನಾನು ವಿದ್ಯಾರ್ಥಿಯಾಗಿದ್ದಾಗ ಡಾ.ಶಿವಕುಮಾರ ಸ್ವಾಮೀಜಿ ಅವರೇ ಖುದ್ದು ಸಂಸ್ಕೃತ, ಇಂಗ್ಲಿಷ್ ಸೇರಿ ಎಲ್ಲವನ್ನೂ ಕಲಿಸುತ್ತಿದ್ದರು, ಅವರು ನೀಡಿದ ಶಿಕ್ಷಣವೇ ನಮ್ಮ ಜೀವನಕ್ಕೆ ಭದ್ರ ಅಡಿಪಾಯ ಹಾಕಿ ಶೈಕ್ಷಣಿಕ ಸಾಧನೆಗೆ ನೆರವಾಗಿದೆ ಎಂದು ಭಾವುಕರಾದರು.

ಮಠದ ಪರಂಪರೆಯ ಭಾಗವಾಗಿ ನನ್ನಂತ ಎಷ್ಟೋ ವಿದ್ಯಾರ್ಥಿಗಳು ಇದ್ದೇವೆ. ಮುಂದೆಯೂ ಇರುತ್ತೇವೆ. ಇಡೀ ಜಗತ್ತಿಗೆ ಸಿದ್ಧಗಂಗಾ ಮಠ ಹೆಸರು ವಾಸಿಯಾಗಿದೆ. ದೇಶ ಸೇರಿ ಪ್ರಪಂಚದಾದ್ಯಂತ ಶ್ರೀಮಠದ ವಿದ್ಯಾರ್ಥಿಗಳು ಉದ್ಯೋಗಗಳಲ್ಲಿದ್ದಾರೆ ಎಂದರು.

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಸಂಗೀತ ನಿರ್ದೇಶಕ ಹಂಸಲೇಖ ಜತೆಗಿದ್ದರು.

ಪತ್ರಕರ್ತರಿಗೂ ಬಜೆಟ್ ಮೀಸಲಿಡಿ: ವಾರ್ತಾ ಇಲಾಖೆಯಲ್ಲಿದ್ದ ನಾನು ಪತ್ರಕರ್ತರ ನಡುವೆಯೇ ಬಂದವನು. ಹಾಗಾಗಿ, ಪತ್ರಕರ್ತರ ಸಮಸ್ಯೆ ಬಗೆಹರಿಸುವಲ್ಲಿ ಸಾಕಷ್ಟು ಪ್ರಯತ್ನ ಮಾಡಿದ್ದೇನೆ. ಭವಿಷ್ಯದಲ್ಲಿಯೂ ಸಮಸ್ಯೆ ಮತ್ತು ಬೇಡಿಕೆ ಈಡೇರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭೃಂಗೇಶ್ ಭರವಸೆ ನೀಡಿದರು.

ನಗರದ ವಾರ್ತಾ ಭವನದಲ್ಲಿ ಪತ್ರಕರ್ತರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಎಲ್ಲ ಮುಖ್ಯಮಂತ್ರಿಗಳು ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಈ ವಿಚಾರದಲ್ಲಿ ಯಡಿಯೂರಪ್ಪ ಅವರು ಹೆಚ್ಚು ಉದಾರವಾದಿ. ಯಾವುದೇ ನಿರ್ಧಾರವನ್ನಾದರೂ ಧೈರ್ಯದಿಂದ ತೆಗೆದುಕೊಳ್ಳುತ್ತಾರೆ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ್ ತಗಡೂರು ಮಾತನಾಡಿ, ಪತ್ರಕರ್ತರಿಗೂ ಈ ಬಾರಿ ಬಜೆಟ್ ಮೀಸಲಾಗಬೇಕು. ಆ ನಿಟ್ಟಿನಲ್ಲಿ ಪತ್ರಕರ್ತರ ಸಮಸ್ಯೆ ಮತ್ತು ಸೌಲಭ್ಯ ಕುರಿತು ಪಟ್ಟಿ ಮಾಡಿ ಕೊಡಲಾಗುವುದು. ಇದು ನಾಡಿನ ಎಲ್ಲ ಪತ್ರಕರ್ತರಿಗೂ ಅನುಕೂಲವಾಗುವಂತೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net