

ಸವಣೂರ: ಗ್ರಾಮೀಣ ಪ್ರದೇಶದ ವಿವಿಧ ಗ್ರಾಮಗಳಿಗೆ ಬಸ್‌ಗಳು ನಿಗದಿತ ಸಮಯಕ್ಕೆ ಆಗಮಿಸದಿರುವ ಹಿನ್ನೆಲೆಯಲ್ಲಿ ಶುಕ್ರವಾರ ತಾಲೂಕಿನ ಚಿಲ್ಲೂರಬಡ್ನಿ ಗ್ರಾಮದಲ್ಲಿ ವಿದ್ಯಾರ್ಥಿಗಳು ಹಾಗೂ ಪಾಲಕರು ಬೆಳಗ್ಗೆಯಿಂದ ಗ್ರಾಮಕ್ಕೆ ಆಗಮಿಸುವ ಎಲ್ಲ ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ನಿತ್ಯ ಶಾಲೆ- ಕಾಲೇಜಿಗೆ ತೆರಳಲು ವಿಳಂಬವಾಗುತ್ತಿದ್ದು, ಈ ಕುರಿತು ಹಲವಾರು ಬಾರಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ಕೈಗೊಂಡು, ಸಾರಿಗೆ ಇಲಾಖೆಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಸೂಚಿಸಿದ ನಂತರ ಬಸ್ ಬಿಡುಗಡೆಗೊಳಿಸಲಾಗುವುದು ಎಂದು ಪಟ್ಟು ಹಿಡಿದರು.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಘಟಕದ ಸಾರಿಗೆ ನಿಯಂತ್ರಕ ಡಿ.ಎನ್. ಬ್ಯಾಡಗಿ ಮಾತನಾಡಿ, ಜೂ. 11ರಿಂದ ಪ್ರಯಾಣಿಕರಿಗೆ ಅಲ್ಪ ಮಟ್ಟದ ಸಮಸ್ಯೆ ಎದುರಾಗುತ್ತಿದೆ. ಚಿಲ್ಲೂರಬಡ್ನಿ ಗ್ರಾಮಕ್ಕೆ ಸಮಯಕ್ಕೆ ಸರಿಯಾಗಿ ಬಸ್ ಚಲಾಯಿಸಲಾಗುವುದು ಎಂದು ಸಮಜಾಯಿಸಿ ನೀಡಲು ಮುಂದಾದರು.
ತಕ್ಷಣ ಮತ್ತಷ್ಟು ಆಕ್ರೋಶಗೊಂಡ ವಿದ್ಯಾರ್ಥಿಗಳು ಹಾಗೂ ಪಾಲಕರು ಮೊದಲು ನಿಮ್ಮ ಹಿರಿಯ ಅಧಿಕಾರಿಗಳನ್ನು ಸ್ಥಳಕ್ಕೆ ಬರಲು ತಿಳಿಸಿ, ನಂತರ, ಪ್ರತಿಭಟನೆಯನ್ನು ಹಿಂಪಡೆಯಲು ಸಾಧ್ಯವಾಗಲಿದೆ ಎಂದು ಪಟ್ಟು ಹಿಡಿದರು.
ಗ್ರಾಮದ ಪ್ರಮುಖರು ಮಾತನಾಡಿ, ಹಾರಿಕೆ ಉತ್ತರ ನೀಡಿ ಅಧಿಕಾರಿಗಳು ನಿತ್ಯ ಬೇಜವಾಬ್ದಾರಿ ತೋರುತ್ತಿದ್ದಾರೆ. ಆದ್ದರಿಂದ, ನೀವು ನಿಮ್ಮ ಅಧಿಕಾರಿಗಳೊಂದಿಗೆ ಮಾತನಾಡಿ ಜವಾಬ್ದಾರಿ ತೆಗೆದುಕೊಳ್ಳಿ ಎಂದು ಒತ್ತಾಯಿಸಿದರು.
ಘಟಕದ ಸಾರಿಗೆ ನಿಯಂತ್ರಕರಾದ ಡಿ.ಎನ್. ಬ್ಯಾಡಗಿ ಹಾಗೂ ಎಫ್.ಬಿ. ಕೆಂಚಣ್ಣವರ ಅವರು ಜೂ. 17ರಿಂದ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಬಸ್ ಕಳುಹಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಎಬಿವಿಪಿ ತಾಲೂಕು ಸಂಚಾಲಕ ಈರಣ್ಣ ಹರದಕಟ್ಟಿ, ವಿದ್ಯಾರ್ಥಿಗಳಾದ ಪ್ರಕಾಶ ಆರೇರ, ಹರೀಶ ಕುರಬರ, ಕಿರಣ ಹೊನ್ನಪ್ಪನವರ, ಪ್ರಶಾಂತ ಶ್ಯಾಗೋಟಿ, ಅರುಣ ಮಾಗಳದ, ಆನಂದ ಜೋಶಿ, ಶಂಭು ಕಲ್ಮಠ, ಪ್ರಮುಖರಾದ ಬಸವರಾಜ ಗೌಳೇರ, ಭೀಮಣ್ಣ ಲಮಾಣಿ, ಶಾಸನಗೌಡ ಪಾಟೀಲ, ಪರಮೇಶ ಮೇಟಿ, ಬೀರಪ್ಪ ಶೆರೆವಾಡ, ಭೀಮಣ್ಣ ದೊಡ್ಡಮನಿ, ಯಲ್ಲಪ್ಪ ಕನಕಣ್ಣವರ, ನಿಂಗಪ್ಪ ವಗ್ಗನವರ ಇದ್ದರು.