

ಗುಂಡ್ಲುಪೇಟೆ: ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಸೀಮಿತವಾಗದೆ ಸುತ್ತಮುತ್ತ ಸಂಭವಿಸುತ್ತಿರುವ ಘಟನಾವಳಿಗಳು ಹಾಗೂ ಕಾನೂನುಗಳ ಬಗ್ಗೆ ಅರಿವು ಪಡೆದುಕೊಳ್ಳಬೇಕಾಗಿದೆ ಎಂದು ಹಿರಿಯ ಸಿವಿಲ್ ಹಾಗೂ ಜೆಎಂಎಫ್ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ ತಳವಾರ್ ಹೇಳಿದರು.
ಪಟ್ಟಣದ ಸರ್ಕಾರಿ ಯಂತ್ರೋಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಅಂಗವಾಗಿ ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಸೋಮವಾರ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಎಲ್ಲವೂ ಕಾನೂನು ವ್ಯಾಪ್ತಿಯಲ್ಲಿ ನಡೆಯಬೇಕಾಗಿದೆ. ಸಂಚಾರ ನಿಯಮ ಉಲ್ಲಂಘಿಸಿ ವಾಹನ ಚಲಾಯಿಸಿದರೆ, ಅಪಘಾತಕ್ಕೊಳಗಾದರೆ ದಂಡ ಮತ್ತು ಶಿಕ್ಷೆಗೆ ಅರ್ಹವಾಗಿತ್ತಾರೆ. ಕಾನೂನಿನ ಪ್ರಕಾರ ಸಮಾಜದಲ್ಲಿ ಎಲ್ಲರೂ ಸಮಾನರಾಗಿದ್ದಾರೆ. ಹಿಂದೆ ನಡೆಯುತ್ತಿದ್ದ ಬಾಲ್ಯವಿವಾಹ, ಸತಿ ಸಹಗಮನ ಮುಂತಾದ ಅನಿಷ್ಠ ಪದ್ಧತಿಗಳನ್ನು ಕಾನೂನಿನಲ್ಲಿ ನಿಷೇಧಿಸಲಾಗಿದ್ದು ಇವುಗಳನ್ನು ಉಲ್ಲಂಘಿಸಿದರೆ ಶಿಕ್ಷೆಗೆ ಒಳಪಡಿಸಲಾಗುತ್ತದೆ. ಆದ್ದರಿಂದ ಎಲ್ಲರೂ ಸಂವಿಧಾನ ಮತ್ತು ಕಾನೂನುಗಳ ಬಗ್ಗೆ ಪ್ರಾಥಮಿಕ ಅರಿವು ಪಡೆದುಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
ಪ್ರಾಂಶುಪಾಲ ಕೆ.ಅನಿಲ್ ಕುಮಾರ್, ವಕೀಲರ ಸಂಘದ ಅಧ್ಯಕ್ಷ ವೆಂಕಟೇಶ ಇತರರು ಇದ್ದರು.