

ಮಾನ್ವಿ: ಇಂಡೋ-ನೇಪಾಳ ಜಂಪ್‌ರೋಪ್ ಚಾಂಪಿಯನ್‌ಷಿಪ್‌ನಲ್ಲಿ ಬಲ್ಲಟಗಿ ಗ್ರಾಮದ ಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಹಾಗೂ ತರಬೇತುದಾರ ಉತ್ತಮ ಪ್ರದರ್ಶನ ತೋರಿ, ಮೂರು ಚಿನ್ನ, ಮೂರು ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
ಶಾಲೆಯ 8ನೇ ತರಗತಿಯ ದೀಕ್ ಪಾಟೀಲ್ ತಲಾ ಒಂದು ಚಿನ್ನ, ಬೆಳ್ಳಿ ಗೆದ್ದರೆ, ಎಸ್ಸೆಸ್ಸೆಲ್ಸಿಯ ಜಿ.ಎಂ. ಉಲ್ಲಾಸ್ ಎರಡು ಬೆಳ್ಳಿ ಪದಕಗಳನ್ನು ಪಡೆದಿದ್ದಾರೆ. ಶಾಲೆಯ ಜಂಪ್‌ರೋಪ್ ತರಬೇತುದಾರ ರವಿಕುಮಾರ ಎರಡು ಬಂಗಾರ ಪದಕ ಗೆದ್ದುಕೊಂಡಿದ್ದಾರೆ.
ನೇಪಾಳದ ಪೋಖರಾ ನಗರದಲ್ಲಿ ಜ.5 ರಿಂದ 8ರವರೆಗೆ ನಡೆದ 2025 ಇಂಡೋ-ನೇಪಾಳ ಜೂನಿಯರ್ ಮತ್ತು ಸೀನಿಯರ್ ಚಾಂಪಿಯನ್‌ಷಿಪ್‌ನಲ್ಲಿ ನೇಪಾಳ, ಭೂತಾನ್ ಮತ್ತು ಭಾರತದ ಕ್ರೀಡಾಪಟುಗಳು ಪಾಲ್ಗೊಂಡಿದ್ದದ್ದರು. ಭಾರತದಿಂದ ಒಟ್ಟು 150 ಕ್ರೀಡಾಪಟುಗಳ ಪೈಕಿ ರಾಜ್ಯದ 9 ಕ್ರೀಡಾಪಟುಗಳು ಭಾಗವಹಿಸಿದ್ದರು. ಅದರಲ್ಲಿ ರಾಯಚೂರು ಜಿಲ್ಲೆಯಿಂದ ಬಸವೇಶ್ವರ ಶಾಲೆಯ ಇಬ್ಬರು ವಿದ್ಯಾರ್ಥಿಗಳು, ತರಬೇತುದಾರ ಪಾಲ್ಗೊಂಡಿದ್ದರು. ಇವರ ಸಾಧನೆಗೆ ಶಾಲೆಯ ಅಧ್ಯಕ್ಷ ಚಂದ್ರಶೇಖರ ಬಲ್ಲಟಗಿ, ಕಾರ್ಯದರ್ಶಿ ಸಂತೃಪ್ತ, ಪ್ರಾಚಾರ್ಯೆ ಸವಿತಾ ಪತ್ತಾರ ಹರ್ಷ ವ್ಯಕ್ತಪಡಿಸಿದ್ದಾರೆ.