

ಚಿಕ್ಕೋಡಿ: ಇಪ್ಪತ್ತೊಂದನೇ ಶತಮಾನ ಭಾರತೀಯರ ಕಾಲಮಾನ, ಭಾರತೀಯರ ಪ್ರೌಢಿಮೆಯನ್ನು ಬಾನೆತ್ತರಕ್ಕೆ ಒಯ್ಯುವ ಪ್ರತಿಭೆಗಳ ಸಾಧನೆಗಳಿಗೆ ಕೆಎಲ್ಇ ಅಂಗಳದಲ್ಲಿ ಸದವಕಾಶವಿದೆ. ಇನ್ನೊಸೈನ್-2024 ಹೊಸ ಆವಿಷ್ಕಾರಗಳಿಗೆ, ನಾವಿನ್ಯ ಪರಿಕಲ್ಪನೆ, ಚೈತನ್ಯಗಳಿಗೆ ವೇದಿಕೆ ಒದಗಿಸುವ ಕೆಲಸ ಕೆಎಲ್ಇ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯ ಮಾಡುತ್ತಿದೆ ಎಂದು ಕೆಎಲ್ಇ ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ ಹೇಳಿದರು.
ಪಟ್ಟಣದ ಕೆಎಲ್ಇ ಸಂಸ್ಥೆಯ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಮಂಗಳವಾರ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆ ಇನ್ನೊಸೈನ್ಸ್-2024 ಉದ್ಘಾಟಿಸಿ ಅವರು ಮಾತನಾಡಿದರು. ಹೊಸ ವಿಚಾರಗಳೊಂದಿಗೆ ಹೊಸ ದಾರಿಯಲ್ಲಿ ನಡೆಯಬೇಕು ಎಂಬ ಅಬ್ದುಲ್ ಕಲಾಂ ಅವರ ಸಂದೇಶದಂತೆ ಪ್ರತಿ ವಿಷಯದಲ್ಲಿ ವಿದ್ಯಾರ್ಥಿ ಶೇ.100 ಅಂಕ ತೆಗೆದುಕೊಳ್ಳುವುದು ಮುಖ್ಯವಲ್ಲ, ಅವರಲ್ಲಿರುವ ಕಾರ್ಯಕ್ಷಮತೆ ಮುಖ್ಯ ಎಂದರು.
ಭಾರತ ಸರ್ಕಾರದ ‘ಇನ್‌ಸ್ಪೈಯರ್ ಇಂಡಿಯಾ’ ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿಶೇಷ ಕಾರ್ಯಕ್ರಮ 18 ವರ್ಷದೊಳಗಿನ ಪ್ರತಿಭಾನ್ವಿತ ಯುವ ವಿಜ್ಞಾನಿಗಳನ್ನು ಗುರುತಿಸುವ ಪ್ರಯತ್ನ ಮಾಡುತ್ತಿದೆ. ಭಾರತದಂತಹ ಹೆಚ್ಚು ಜನಸಂಖ್ಯೆ ಇರುವ ದೇಶದಲ್ಲಿ ಶಿಕ್ಷಣ ನೀಡಿದಾಗ ಅದು ಮಾನವ ಸಂಪನ್ಮೂಲವಾಗಿ ಪರಿವರ್ತನೆಗೊಂಡು ಸಾಧನೆಯ ಎತ್ತರಕ್ಕೆ ಒಯ್ಯುತ್ತದೆ ಎಂದು ತಿಳಿಸಿದರು.
ಚಿಕ್ಕೋಡಿ ಡಿಡಿಪಿಐ ಆರ್.ಎಸ್.ಸೀತಾರಾಮು ಮಾತನಾಡಿ, ಪ್ರತಿಷ್ಠಿತ ಕೆಎಲ್ಇ ಸಂಸ್ಥೆಯಲ್ಲಿ ಕಲಿತ ಮಕ್ಕಳಿಗೆ ದೇಶ-ವಿದೇಶಗಳಲ್ಲಿ ಅಪಾರ ಅವಕಾಶಗಳಿವೆ ಎಂದರು.
ಸ್ಪರ್ಧೆಯಲ್ಲಿ ಭಾಗವಹಿಸಿದ 66 ತಂಡಗಳ ಪೈಕಿ ಕೆಎಲ್ಇ ಸಿಬಿಎಸ್‌ಸಿ ಶಾಲೆ ನಿಪ್ಪಾಣಿ ಪ್ರಥಮ, ಎಂಡಿಆರ್‌ಎಸ್ ಗವಾನ ದ್ವಿತೀಯ, ಎಸ್‌ಬಿಎಸ್ ಕನ್ಯಾ ಶಾಲೆ ನಿಪ್ಪಾಣಿ ತೃತೀಯ ಸ್ಥಾನ ಪಡೆದುಕೊಂಡವು.
ಪ್ರಾಚಾರ್ಯರಾದ ಡಾ.ಪ್ರಸಾದ ರಾಂಪೂರೆ, ಪಿ. ವೆಂಕಟ ರೆಡ್ಡಿ ಮಾತನಾಡಿದರು. ರೇಖಾ ಮೇತ್ರಿ ಸ್ವಾಗತಿಸಿದರು. ಅಂಕಿತಾ ಮಗದುಮ್ಮ ವಂದಿಸಿದರು, ಗಂಗಾ ಅರಬಾವಿ ನಿರೂಪಿಸಿದರು.