

ಚಿತ್ರದುರ್ಗ: ರಾಜ್ಯ ಬಿಜೆಪಿ ಸರ್ಕಾರ, ವಿದ್ಯಾರ್ಥಿ ಸಮೂಹದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಎನ್‌ಎಸ್‌ಯುಐ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಶೈಕ್ಷಣೀಕ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಿ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿ ರಾಜ್ಯಪಾಲರು, ಮುಖ್ಯಮಂತ್ರಿಗೆ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ಹಲವು ಪರೀಕ್ಷೆಗಳ ಫಲಿತಾಂಶ ವಿಳಂಬವಾಗಿದೆ, ವಿದ್ಯಾರ್ಥಿ ವೇತನ ವಿತರಣೆಯಲ್ಲಿ ಸಮಸ್ಯೆ ಉಂಟಾಗಿದೆ, ಸರ್ಕಾರಿ ಕಾಲೇಜುಗಳಲ್ಲಿ ಶುಲ್ಕ ಹೆಚ್ಚಿಸಲಾಗಿದೆ, ಬಸ್ ಪಾಸ್ ಸೌಲಭ್ಯದಿಂದಲೂ ಹಲವೆಡೆ ತೊಂದರೆಯಾಗಿದೆ. ಇವುಗಳನ್ನು ಪರಿಹರಿಸುವಲ್ಲಿ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ ಎಂದು ದೂರಿದರು.
ಫಲಿತಾಂಶ ಸರಿಯಾದ ಸಮಯಕ್ಕೆ ಪ್ರಕಟಿಸಬೇಕು. ವಿದ್ಯಾರ್ಥಿ ವೇತನ ತಕ್ಷಣ ಬಿಡುಗಡೆಗೊಳಿಸಬೇಕು. ಉಚಿತ ಬಸ್ ಪಾಸ್, ಲ್ಯಾಪ್‌ಟಾಪ್ ವಿತರಿಸಲು ಕ್ರಮ ಕೈಗೊಳ್ಳಬೇಕು. ಸರ್ಕಾರಿ ಕಾಲೇಜುಗಳಲ್ಲಿ ಹೆಚ್ಚಿಸಿರುವ ಶುಲ್ಕ ಕಡಿಮೆಗೊಳಿಸಬೇಕು ಎಂದು ಆಗ್ರಹಿಸಿದರು.
ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ವಿನಯ್ ಗೋಡೆಮನೆ, ಉಪಾಧ್ಯಕ್ಷೆ ರಕ್ಷಿತಾ ರಾಥೋಡ್, ಕಾರ್ಯದರ್ಶಿಗಳಾದ ಸಚಿನ್, ಕಿರಣ್, ಡಿ.ಜೆ.ರಮೇಶ್, ರೋಹನ್, ಸಚಿನ್ ರಾಯಣ್ಣ, ರಘು, ಪವನ್ ಇತರರಿದ್ದರು.