

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಪ್ರಶಿಕ್ಷಣಾರ್ಥಿಗಳು ಶಿಕ್ಷಕ ವೃತ್ತಿಯನ್ನು ಗೌರವಿಸಿ, ಪ್ರೀತಿಸಿ ಬೋಧಿಸಬೇಕು. ಗುರು-ಶಿಷ್ಯರ ಪರಂಪರೆ ಅವಿಸ್ಮರಣೀಯ ಎಂದು ಮಂಗಳೂರಿನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್)ಯ ಹಿರಿಯ ಉಪನ್ಯಾಸಕ, ಬೆಳ್ತಂಗಡಿ ತಾಲೂಕು ನೋಡಲ್ ಅಧಿಕಾರಿ ಶಶಿಧರ ಜಿ.ಎಸ್. ಹೇಳಿದರು.
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಕರ ತರಬೇತಿ(ಡಿ.ಇಎಲ್.ಇಡಿ) ಸಂಸ್ಥೆಯಲ್ಲಿ ಸ್ವಾಗತ ದಿನಾಚರಣೆ, ವಿದ್ಯಾರ್ಥಿ ಸಂಘ, ವಿಷಯವಾರು ಸಂಘಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಸ್.ಡಿ.ಎಂ.ಇ. ಸೊಸೈಟಿ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಧನ್ಯಕುಮಾರ್ ಅಧ್ಯಕ್ಷತೆ ವಹಿಸಿ, ವಿಷಯವಾರು ಸಂಘ ಉದ್ಘಾಟಿಸಿದರು. 2024-25ನೇ ಸಾಲಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾಗಿ ಆಯ್ಕೆಯಾದವರಿಗೆ ಪ್ರಾಂಶುಪಾಲರು ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ ಫಾತಿಮಾ(ದ್ವಿತೀಯ ಡಿ.ಇಡಿ), ಉಪಕಾರ್ಯದರ್ಶಿಯಾಗಿ ಪ್ರಭಾವತಿ (ಪ್ರಥಮ ಡಿ.ಇಡಿ), ಕ್ರೀಡಾ ಕಾರ್ಯದರ್ಶಿಯಾಗಿ ಚಿತ್ರಲೇಖ(ದ್ವಿತೀಯ ಡಿ.ಇಡಿ), ಉಪ ಕಾರ್ಯದರ್ಶಿಯಾಗಿ ಶ್ರೀಕುಮಾರ್(ಪ್ರಥಮ ಡಿ.ಎಡ್), ಸಾಂಸ್ಕೃತಿಕ ಸಂಘದ ಕಾರ್ಯದರ್ಶಿಯಾಗಿ ಅನುಷಾ(ದ್ವಿತೀಯ ಡಿ.ಇಡಿ), ಉಪಕಾರ್ಯದರ್ಶಿಯಾಗಿ ಜಯಶ್ರೀ(ಪ್ರಥಮ ಡಿ.ಇಡಿ), ಶಿಸ್ತುಪಾಲನ ಕಾರ್ಯದರ್ಶಿಯಾಗಿ ತೇಜು( ದ್ವಿತೀಯ ಡಿ.ಇಡಿ), ಉಪಕಾರ್ಯದರ್ಶಿಯಾಗಿ ಸತ್ಯನಾರಾಯಣ(ಪ್ರಥಮ ಡಿ.ಇಡಿ) ಆಯ್ಕೆಯಾದರು.
ಉಪನ್ಯಾಸಕರಾದ ಮಂಜು ಆರ್, ಪ್ರಿಯದರ್ಶಿನಿ, ಸಿಬ್ಬಂದಿ ವರ್ಗ, ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪ್ರಾಂಶುಪಾಲ ಸ್ವಾಮಿ ಕೆ.ಎ. ಸ್ವಾಗತಿಸಿದರು. ಪ್ರಶಿಕ್ಷಣಾರ್ಥಿಗಳಾದ ಅಂಬಿಕಾ, ಅಶ್ವಿತಾ, ಅನುಷಾ ಪ್ರಾರ್ಥಿಸಿ, ಶಹನಾಝ್ ವಂದಿಸಿದರು. ಮುಝೈನಾ ಕಾರ್ಯಕ್ರಮ ನಿರೂಪಿಸಿದರು.