

ಶಿವಮೊಗ್ಗ: ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಅಥವಾ ಫೇಲಾಗಿದ್ದಕ್ಕೆ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ಹೊಸದೇನಲ್ಲ. ಆದರೆ ಇಲ್ಲೊಬ್ಬಳು ವಿದ್ಯಾರ್ಥಿನಿ ಇನ್ನೂ ಪರೀಕ್ಷೆಯೇ ಮುಗಿದಿಲ್ಲ, ಅದಾಗಲೇ ಅಂಕ ಕಡಿಮೆ ಬರಬಹುದೇನೋ ಎಂಬ ಭಯದಿಂದ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಹೊಸನಗರ ತಾಲೂಕು ರಿಪ್ಪನ್ಪೇಟೆ ಸಮೀಪದ ಕೆಂಚನಾಲ ಗ್ರಾಮದ ವಿದ್ಯಾರ್ಥಿನಿಯೊಬ್ಬಳು ಇಂಥದ್ದೊಂದು ಪ್ರಯತ್ನ ಮಾಡಿ, ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಈಕೆ ರಿಪ್ಪನ್ಪೇಟೆ ಮೇರಿ ಮಾತಾ ಪ್ರೌಢಶಾಲೆ ವಿದ್ಯಾರ್ಥಿನಿ.
ಇಂದು ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ಮನೆಗೆ ಬಂದಿದ್ದ ವಿದ್ಯಾರ್ಥಿನಿ, ಕಡಿಮೆ ಅಂಕ ಬರುತ್ತದೆ ಎಂಬ ಆತಂಕದಿಂದ ತಾಯಿ ಬಳಸುತ್ತಿದ್ದ ಥೈರಾಯ್ಡ್ ಮಾತ್ರೆಗಳನ್ನು ಸೇವಿಸಿದ್ದಳು. ವಿಷಯ ಗೊತ್ತಾಗಿ ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾಳೆ.