

ಸಿರವಾರ: ಪ್ರತಿಭಾ ಕಾರಂಜಿ ಹಾಗೂ ವಿವಿಧ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸೂಕ್ತ ವಾಹನದ ವ್ಯವಸ್ಥೆ ಮಾಡದಿರುವುದು ಕಂಡುಬರುತ್ತಿದೆ. ಈ ಮೂಲಕ ಶಿಕ್ಷಕರು ವಿದ್ಯಾರ್ಥಿಗಳ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂಬ ಆರೋಪ ಪಾಲಕರಿಂದ ವ್ಯಕ್ತವಾಗುತ್ತಿದೆ.
ನವಲಕಲ್ ಸಮೀಪದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ವಲಯ ಮಟ್ಟದ ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ. ಅತ್ತನೂರು ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು, ಟಾಟಾ ಏಸ್ ವಾಹನದಲ್ಲಿ ಕರೆದುಕೊಂಡು ಬರಲಾಗಿತ್ತು.
ಸುಮಾರು 5 ವರ್ಷಗಳ ಹಿಂದೆ ಇದೇ ಕುರಕುಂದ ಗ್ರಾಮದಲ್ಲಿ ಆಯೋಜನೆ ಮಾಡಿದ್ದ ಕ್ರೀಡಾಕೂಟದಲ್ಲಿ ಭಾಗವಹಿಸಿ ಸಿರವಾರಕ್ಕೆ ಹಿಂದಿರುಗುವಾಗ ನವಲಕಲ್ ಹತ್ತಿರ ಟಾಟಾ ಏಸ್ ಪಲ್ಟಿಯಾಗಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಒಬ್ಬ ವಿದ್ಯಾರ್ಥಿನಿ ಶಾಶ್ವತವಾಗಿ ಅಂಗವಿಕಲೆಯಾಗಿದ್ದಾಳೆ. ಇನ್ನೊಬ್ಬ ವಿದ್ಯಾರ್ಥಿನಿಯ ಸೊಂಟದ ಮೂಳೆ ಮುರಿದು ಹಲವು ದಿನ ಹಿಡಿದಿದ್ದಳು. ಇನ್ನೂ ಹಲವು ವಿದ್ಯಾರ್ಥಿನಿಯರು ಗಾಯಗೊಂಡು ಚೇತರಿಸಿಕೊಂಡಿದ್ದರು. ಆದರೂ, ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ನಿರ್ಲಕ್ಷೃ ವಹಿಸಿರುವುದು ಕಂಡುಬರುತ್ತಿದೆ.