ವಿದ್ಯಾರ್ಥಿ ಪ್ರತಿಭೆಗಳಿಗೆ ಪ್ರೋತ್ಸಾಹ ಅಗತ್ಯ

26 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಪ್ರಾಥಮಿಕ ಮತ್ತು ಪ್ರೌಢ ಶಾಲಾ ಹಂತದಲ್ಲೇ ವಿದ್ಯಾರ್ಥಿ ಪ್ರತಿಭೆಗಳನ್ನು ಮುಕ್ತ ನೆಲೆಯಲ್ಲಿ ಗುರುತಿಸಿ ಪ್ರೋತ್ಸಾಹಿಸಿ ಪುರಸ್ಕರಿಸುವ ಅಗತ್ಯವಿದೆ ಎಂದು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕಿರಿಯ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಅಮ್ಮಿನಬಾವಿ ಗ್ರಾಮದ ಪಂಚಗೃಹ ಹಿರೇಮಠ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಅಮ್ಮಿನಬಾವಿಯ ಸುಶಿಲಾತಾಯಿ ಅಜ್ಜಯ್ಯ ಹಿರೇಮಠ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ 2024-25ನೇ ಶೈಕ್ಷಣಿಕ ವರ್ಷದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಹಾಗೂ ಕಲೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲ ಸ್ಪರ್ಧೆಗಳಲ್ಲಿ ಪೂರ್ವಾಗ್ರಹ ಪೀಡಿತ ಮನಸ್ಥಿತಿಗೆ ಒಳಗಾಗದೆ ನ್ಯಾಯಯುತವಾಗಿ ತೀರ್ಪು ನೀಡಿ ಶಾಲಾ ಮಕ್ಕಳ ಪ್ರತಿಭಾ ವಿಕಾಸಕ್ಕೆ ಪ್ರೋತ್ಸಾಹಿಸಬೇಕು ಎಂದರು.

ಗ್ರಾಮೀಣ ಬಿಇಒ ರಾಮಕೃಷ್ಣ ಸದಲಗಿ ಮಾತನಾಡಿ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸವನ್ನೇ ಕೇಂದ್ರೀಕರಿಸಿ ನಡೆಸಲಾಗುವ ಈ ಸ್ಪರ್ಧೆಗಳು ಸಂಪೂರ್ಣ ಪಾರದರ್ಶಕ ನೆಲೆಯಲ್ಲಿ ನಡೆಯುವಂತೆ, ಜತೆಗೆ ವಿದ್ಯಾರ್ಥಿಗಳಲ್ಲಿ ಹುದುಗಿರುವ ಸುಪ್ತ ಪ್ರತಿಭೆ ಗುರುತಿಸಲು ಸ್ಪರ್ಧೆಗಳ ಉಸ್ತುವಾರಿ ಸಿಬ್ಬಂದಿ ಸಭೆ ನಡೆಸಿ ಸೂಚನೆಗಳನ್ನು ನೀಡಲಾಗಿದೆ ಎಂದರು.

ನೀಲವ್ವ ತಿದಿ, ಸದಸ್ಯರಾದ ಮೌನೇಶ ಪತ್ತಾರ, ಮಂಜುನಾಥ ಹೂಲಿ, ಗುರುಶಾಂತಲಿಂಗ ಶಿಕ್ಷಣ ಪ್ರತಿಷ್ಠಾನದ ನಿರ್ದೇಶಕರಾದ ಬಿ.ಸಿ. ಕೊಳ್ಳಿ, ವಿ.ಬಿ. ಕೆಂಚನಗೌಡರ, ಬಿಆರ್​ಸಿ ಸಮನ್ವಯಾಧಿಕಾರಿ ಕುಮಾರ ಕೆ.ಎಫ್​., ಶ್ರೀಕಾಂತ್​ ಗೌಡ, ಬಸವರಾಜ ಛಬ್ಬಿ, ಈಶ್ವರ ಆಯಟ್ಟಿ, ಬಸವರಾಜ ಕುರಗುಂದ, ರಾಜಶೇಖರ ಹೊನ್ನಪ್ಪನವರ, ಅಜಿತಕುಮಾರ ದೇಸಾಯಿ, ಶಂಕರ ಟ್ಟಿ, ಎನ್​.ಎಸ್​. ಕಮ್ಮಾರ, ಕೃಷ್ಣಾ ಬೊಂಗಾಳೆ, ಟಿ.ಎಂ. ದೇಸಾಯಿ, ಮಂಜುಳಾ ದೊಡಮನಿ, ಎಂ.ಎನ್​. ಆಲದಕಟ್ಟಿ, ವಿನಾಯಕ ಹಿರೇಮಠ, ಎಂ. ಆಂಜನೇಯ, ಇತರರು ಇದ್ದರು.

1 ರಿಂದ 4ನೇ ತರಗತಿ ವಿಭಾಗದಲ್ಲಿ 15, 5 ರಿಂದ 7ನೇ ತರಗತಿಗೆ 18 ಹಾಗೂ 8 ರಿಂದ 10ನೇ ತರಗತಿಗೆ 21 ಸೇರಿ ಒಟ್ಟು 54 ಸ್ಪರ್ಧೆಗಳು ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net