ಯೂಟ್ಯೂಬ್ ಕೋಚಿಂಗ್ ನೀಡಿ ಕಾರು ಖರೀದಿ : ಐಎಎಸ್, ಐಪಿಎಸ್ ಆಕಾಂಕ್ಷಿಗಳಿಗೆ ತರಬೇತಿ ಕೊಡುತ್ತಿರುವ ಬಿಎಸ್ಸಿ ವಿದ್ಯಾರ್ಥಿ

student
ಸಾಯೂಜ್ ಚಂದ್ರನ್
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಐಎಎಸ್, ಐಪಿಎಸ್ ಪರೀಕ್ಷೆ ತೇರ್ಗಡೆಯಾಗುವುದು ಭಾರಿ ಸಾಹಸವೆಂದೇ ಪರಿಗಣಿಸಲ್ಪಟ್ಟಿರುವ ಈ ಕಾಲದಲ್ಲಿ ಬಿಎಸ್ಸಿ ಓದುತ್ತಿರುವ ವಿದ್ಯಾರ್ಥಿಯೊಬ್ಬರು ಐಎಎಸ್-ಐಪಿಎಸ್ ಪರೀಕ್ಷಾ ಆಕಾಂಕ್ಷಿಗಳಿಗೆ ಕೋಚಿಂಗ್ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ.

ಚೆಮ್ನಾಡಿನ ನಿವೃತ್ತ ಸೈನಿಕ ಪಿ.ಚಂದ್ರನ್ ಮತ್ತು ಸಾಮಾಜಿಕ ಕಾರ್ಯಕರ್ತೆ ಎಂಎನ್‌ಆರ್‌ಇಜಿಎಸ್ ಮೇಲ್ವಿಚಾರಕಿ ಸ್ವಾತಿ ಚಂದ್ರನ್ ದಂಪತಿ ಪುತ್ರ ಸಾಯೂಜ್ ಚಂದ್ರನ್ ಈ ಸಾಧನೆ ಮಾಡಿರುವ ವಿದ್ಯಾರ್ಥಿ. ಯೂಟ್ಯೂಬ್ ಚಾನೆಲ್‌ನಲ್ಲಿ ಕೋಚಿಂಗ್ ನೀಡಿ ಅವರು 10 ಲಕ್ಷ ರೂ. ಮೌಲ್ಯದ ಕಾರು ಖರೀದಿಸಿದಾಗಲೇ ಅವರ ಈ ಸಾಧನೆ ಹೊರಜಗತ್ತಿಗೆ ತಿಳಿದದ್ದು.

ಕಾಸರಗೋಡು ಜಿಲ್ಲೆಯ ರಾಜಾಪುರಂ ಸೇಂಟ್ ಪೀಯೂಸ್ ಕಾಲೇಜಿನಲ್ಲಿ ಮೈಕ್ರೋಬಯಾಲಜಿ ವಿಷಯದಲ್ಲಿ ಬಿಎಸ್ಸಿ ಶಿಕ್ಷಣ ಪಡೆಯುತ್ತಿರುವ ಸಾಯೂಜ್ ಚಂದ್ರನ್ ಅವರ ಈ ಸಾಧನೆಗೆ ಊರಿನ ಜನತೆ ಬೆರಗಾಗಿದ್ದಾರೆ. ಹಾಗೆಂದು ಸಾಯೂಜ್ ಚಂದ್ರನ್ ಅವರದ್ದು ಒಂದೆರಡು ತಿಂಗಳಲ್ಲಿ ಮಾಡಿದ ಸಾಧನೆ ಇದಲ್ಲ. ನಿರಂತರ ಓದು, ಅಂತರ್ಜಾಲದ ಹುಡುಕಾಟ, ಯೂಟ್ಯೂಬ್ ಚಾನೆಲ್‌ಗಳ ಫಾಲೋ, ಮಹೋನ್ನತ ನಾಯಕರ ಆಂಗ್ಲ ಭಾಷಣಗಳನ್ನು ಕೇಳುವ ಮೂಲಕ ಈ ಮಹತ್ತರ ಸಾಧನೆ ಮಾಡಲಾಗಿದೆ. ಬಸ್ ಪ್ರಯಾಣದ ಮಧ್ಯೆ, ಮನೆಯಲ್ಲಿ, ಕಾಲೇಜಿನಲ್ಲಿ ಲಭಿಸುವ ಬಿಡುವಿನ ಕಾಲವಧಿಯನ್ನು ಇದಕ್ಕಾಗಿ ಮೀಸಲಿರಿಸಿದ್ದಾರೆ.

ಗರಿಗೆದರಿದ ಕನಸು

ಸಾಯೂಜ್ 2022ರಲ್ಲಿ ಪ್ಲಸ್‌ಟು ಮುಗಿಸಿದ ಬಳಿಕ ವೈದ್ಯನಾಗುವ ಕನಸಿನೊಂದಿಗೆ ನೀಟ್ ಪರೀಕ್ಷೆ ಎದುರಿಸಿದ್ದಾರೆ. ಆದರೆ ನಿರೀಕ್ಷಿತ ಅಂಕ ಬಾರದಿರುವುದರಿಂದ ರಾಜಪುರಂ ಸೇಂಟ್ ಪೀಯೂಸ್ ಕಾಲೇಜಿಗೆ ಸೇರಿದ್ದಾರೆ.

ಬಿಎಸ್ಸಿ ಓದುತ್ತಿರುವಾಗಲೇ ಐಎಎಸ್ ಪರೀಕ್ಷೆ ಬರೆಯುವ ಹಂಬಲ ಇವರಲ್ಲಿ ಹುಟ್ಟಿಕೊಂಡಿತ್ತು. ಇದಕ್ಕಾಗಿ ಎರಡು ಆಂಗ್ಲ ಪತ್ರಿಕೆಯ ಆನ್‌ಲೈನ್ ಎಡಿಶನ್ ಓದಲು ಇ-ಪೇಪರ್ ಸಬ್‌ಸ್ಕ್ರೈಬ್ ಮಾಡಿಕೊಂಡಿದ್ದರು. ಅಲ್ಲಿಂದ ಮುಂದೆ ಆಂಗ್ಲಭಾಷೆಯ ಮೇಲೆ ಹಿಡಿತ ಸಾಧಿಸಲು ಪತ್ರಿಕೆಗಳ ಓದು, ಪ್ರಭಾವಿ ನೇತಾರರ ಭಾಷಣ ಅಲಿಸಲು ಆರಂಭಿಸಿದ್ದರು. ಜತೆಗೆ ಜನರಲ್ ಸ್ಟಡೀಸ್‌ಗಾಗಿ ಯೂಟ್ಯೂಬ್ ಚಾನೆಲ್ ಒಂದನ್ನು ಫಾಲೋ ಮಾಡಿಕೊಂಡು ಬರಲಾರಂಭಿಸಿದ್ದಾರೆ. ನಂತರ ತಾನು ಕಲಿತ ವಿಷಯಗಳೆಲ್ಲವನ್ನೂ ಅಪ್‌ಲೋಡ್ ಮಾಡಲು ತನ್ನದೇ ಆದ ಯೂಟ್ಯೂಬ್ ಚಾನಲ್ ಒಂದನ್ನು ಹುಟ್ಟುಹಾಕಿ ಇದಕ್ಕೆ ‘ಐಎಎಸ್ ಅಕಾಡೆಮಿ’ ಎಂಬುದಾಗಿ ಹೆಸರಿಟ್ಟುಕೊಂಡು ಕೆಲವೇ ಸಮಯದಲ್ಲಿ ಹೆಚ್ಚು ಜನರನ್ನು ಆಕರ್ಷಿಸಿದ್ದಾರೆ. ನಂತರ ಚಾನೆಲ್ ಹೆಸರನ್ನು ‘ಐಎಎಸ್ ಹಬ್ ಮಲಯಾಳಂ’ ಎಂಬುದಾಗಿ ಬದಲಾಯಿಸಿಕೊಂಡು ಇಂಗ್ಲಿಷ್ ನೋಟ್ಸ್ ತಯಾರಿಸಿ ಅಪ್‌ಲೋಡ್ ಮಾಡಿಕೊಂಡು ಬಂದಿದ್ದಾರೆ. ನಂತರ ಟೆಲಿಗ್ರಾಂ ಗ್ರೂಪ್ ಆರಂಭಿಸುವ ಮೂಲಕ ಮತ್ತಷ್ಟು ಐಎಎಸ್ ಆಸಕ್ತರನ್ನು ಗುಂಪಿನಲ್ಲಿ ಸೇರಿಸಿದ್ದಾರೆ. ನೂರಾರು ಮಂದಿ ಫಾಲೋವರ್ಸ್‌ಗಳನ್ನು ಹುಟ್ಟುಹಾಕಿದ್ದಾರೆ. ಇದನ್ನು ಖಾಸಗಿಯಾಗಿ ಮಾಡಿ ಮಾಸಿಕ 500 ರೂ.ನಂತೆ ಕಟ್ಟಿ ಸಬ್‌ಸ್ಕ್ರೈಬ್ ಆಗುವಂತೆ ಮಾಡಿಕೊಂಡಿದ್ದಾರೆ. ಬಡವರು, ದೈಹಿಕ ದೌರ್ಬಲ್ಯ ಹೊಂದಿದವರಿಗೆ ಉಚಿತವಾಗಿ ಯೂಟ್ಯೂಬ್ ಲಿಂಕ್ ಕಳುಹಿಸುತ್ತಿದ್ದರು. ಈ ಮೂಲಕ ಕಡಿಮೆ ಕಾಲಾವಧಿಯಲ್ಲಿ ಲಕ್ಷಾಂತರ ರೂ. ಸಂಪಾದಿಸಿ, ಸ್ವಂತ ಕಾರು ಖರೀದಿಸಿದ್ದಾರೆ. ಪ್ರಸಕ್ತ ಲೈವ್ ತರಗತಿಯಲ್ಲಿ 95 ಮಂದಿ ವಿದ್ಯಾರ್ಥಿಗಳಿದ್ದಾರೆ.

ಬಿಎಸ್ಸಿ ತರಗತಿ ಪೂರ್ತಿಯಾಗುತ್ತಿದ್ದಂತೆ 2025ರಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆಯಲು ಸಿದ್ಧತೆ ಮಾಡಿಕೊಂಡಿದ್ದಾರೆ. ಯುಪಿಎಸ್‌ಸಿ ಉತ್ತೀರ್ಣರಾದರೆ ಮುಂದಿನ ದಿನಗಳಲ್ಲಿ ಉಚಿತ ತರಗತಿ ನೀಡುವುದಾಗಿ ಸಾಯೂಜ್ ಚಂದ್ರನ್ ತಿಳಿಸುತ್ತಾರೆ.

ನಮ್ಮಲ್ಲಿ ಐಎಎಸ್, ಐಪಿಎಸ್ ಬರೆಯಲು ಆಸಕ್ತಿ ಹೊಂದಿರುವವರಿದ್ದಾರೆ. ಆದರೆ ಸಾಯೂಜ್ ಚಂದ್ರನ್ ರೀತಿ ಇನ್ನೊಬ್ಬರಿಗೆ ಕಲಿಸುವ ಸಾಮರ್ಥ್ಯ ಹೊಂದಿರುವವರು ಯಾರೂ ಇಲ್ಲ. ಅವರ ಯೂಟ್ಯೂಬ್ ಚಾನೆಲ್ ಫಾಲೋ ಮಾಡುವವರಲ್ಲಿ ಐಟಿ ಪರಿಣತರು, ಖಾಸಗಿ-ಸರ್ಕಾರಿ ಉದ್ಯೋಗಸ್ಥರು ಇದ್ದಾರೆ. - ಡಾ.ಆಶಾ ಚಾಕೋ, ಸಾಯೂಜ್‌ಚಂದ್ರನ್ ಅವರ ಕೆಮಿಸ್ಟ್ರಿ ಉಪನ್ಯಾಸಕಿ https://www.vijayavani.net/congress-meeting-8 https://www.vijayavani.net/rusty-gos-without-maintenance

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net