ವಿದ್ಯಾರ್ಥಿ ವೇತನ ಸಿಎಂ ಪರಿಹಾರ ನಿಧಿಗೆ

22ravig5-Web
ರಾಮದುರ್ಗ ತಾಲೂಕಿನ ನಾಗನೂರ ಗ್ರಾಮದ ಬಾಲಕ ಚನ್ನಬಸವ ಪಾಟೀಲ ತಾಯಿಯೊಂದಿಗೆ ತೆರಳಿ ತಹಸೀಲ್ದಾರ್ ಗಿರೀಶ್ ಸಾದ್ವಿ ಅವರ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ 5 ಸಾವಿರ ಹಣ ನೀಡಿದರು.
Published on

ಬೆಳಗಾವಿ: ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಜಿಲ್ಲೆಯ 10 ವರ್ಷದ ಬಾಲಕ ತನ್ನ ಶಿಷ್ಯವೇತನ ಹಾಗೂ ಮನೆಯಲ್ಲಿ ಕೂಡಿಟ್ಟ 5 ಸಾವಿರ ರೂ. ನೀಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾನೆ.ರಾಮದುರ್ಗ ತಾಲೂಕಿನ ನಾಗನೂರ ಗ್ರಾಮದ ಚನ್ನಬಸವ ಪಾಟೀಲ, ನಾಲ್ಕನೇ ತರಗತಿ ಓದುತ್ತಿದ್ದು, ಈವರೆಗೆ ತನಗೆ ಬಂದ ವಿದ್ಯಾರ್ಥಿ ವೇತನದ ಹಣ ಹಾಗೂ ಮನೆಯವರು ನೀಡಿದ್ದ ಹಣವನ್ನು ಕೂಡಿಟ್ಟಿದ್ದ. ಅದನ್ನ ತನ್ನ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳುವ ಆಲೋಚನೆಯಲ್ಲಿದ್ದ. ಆದರೆ, ಇಡೀ ದೇಶವನ್ನೇ ಕಾಡುತ್ತಿರುವ ಕರೊನಾ ಮಹಾಮಾರಿಗೆ ಪೊಲೀಸರು, ವೈದ್ಯಕೀಯ ಸಿಬ್ಬಂದಿ ಹಗಲಿರುಳೂ ಶ್ರಮಿಸುತ್ತಿದ್ದಾರೆ. ಅವರ ನೆರವಿಗೆ ತಾನು ಕೂಡಿಟ್ಟ 5,000 ರೂ. ನೀಡುವ ಹಂಬಲವನ್ನು ತನ್ನ ತಾಯಿಯ ಮುಂದೆ ಹೇಳಿಕೊಂಡಿದ್ದಾನೆ. ಮಗನ ಆಸೆ ಈಡೇರಿಸುವ ಬಯಕೆಯಿಂದ ಬುಧವಾರ ರಾಮದುರ್ಗ ತಹಸೀಲ್ದಾರ್ ಕಚೇರಿಗೆ ಬಾಲಕನೊಂದಿಗೆ ಆತನ ತಾಯಿ ಭೇಟಿ ನೀಡಿ 5,000 ರೂ. ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ. ತಹಸೀಲ್ದಾರ್ ಗಿರೀಶ್ ಸಾದ್ವಿ ಅವರು ಬಾಲಕನ ದೇಶಪ್ರೇಮ, ಸಾಮಾಜಿಕ ಕಳಕಳಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net