

ಬೈಂದೂರು: ಅಪಘಾತಗಳ ನಡೆದಾಗ ಯಾರನ್ನೋ ಹೊಣೆಯಾಗಿಸುವ ಬದಲು ರಸ್ತೆ ಸಂಚಾರ ನಿಯಮ ಅರಿತು ಕಡ್ಡಾಯವಾಗಿ ಪಾಲಿಸುವುದು ಮುಖ್ಯ. ಬೈಂದೂರು ವಲಯದಲ್ಲಿ 26,000 ವಿದ್ಯಾರ್ಥಿಗಳ ವ್ಯಾಸಂಗ ಮಾಡುತ್ತಿದ್ದು, ಅವರೆಲ್ಲರ ರಕ್ಷಣೆ ಪ್ರತಿ ನಾಗರಿಕರ ಜವಾಬ್ದಾರಿ ಎಂದು ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ಕೆ.ನಾಯ್ಕ ಹೇಳಿದರು.
ರೋಟರಿ ಕ್ಲಬ್ ಬೈಂದೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಬೈಂದೂರು ವತಿಯಿಂದ ಕಂಬದಕೋಣೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಸ್ತೆ ಸುರಕ್ಷತಾ ಕಾರ್ಯಕ್ರಮದ ಅಂಗವಾಗಿ ಶಾಲಾ ವಾಹನಗಳ ಚಾಲಕರು ಹಾಗೂ ಮುಖ್ಯಸ್ಥರಿಗೆ ಹಮ್ಮಿಕೊಂಡ ವಿದ್ಯಾರ್ಥಿ ಸುರಕ್ಷತಾ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಬೈಂದೂರು ಪೊಲೀಸ್ ಉಪನಿರೀಕ್ಷಕ ನವೀನ್ ಬೋರ್ಕರ್ ಮಾತನಾಡಿದರು. ರೋಟರಿ ಕ್ಲಬ್ ಅಧ್ಯಕ್ಷ ಮೋಹನ್ ರೇವಣ್ಕರ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲೆ ಚಿತ್ರಾ ಶೆಣೈ ಉಪಸ್ಥಿತರಿದ್ದರು. ಕುಂದಾಪುರ ಸಂಚಾರ ಪೊಲೀಸ್ ಠಾಣೆ ಎಎಸ್‌ಐ ಸುರೇಶ್ ಎಸ್.ಕೆ. ಸಂಚಾರ ಸುರಕ್ಷತೆ ಬಗ್ಗೆ ಕಾರ್ಯಾಗಾರ ನಡೆಸಿಕೊಟ್ಟರು. ರೋಟರಿ ಕಾರ್ಯದರ್ಶಿ ಸುನೀಲ್ ಎಚ್.ಜಿ. ಸ್ವಾಗತಿಸಿದರು. ಸಿಆರ್‌ಪಿ ಮಂಜುನಾಥ ದೇವಾಡಿಗ ವಂದಿಸಿದರು. ಶಿಕ್ಷಕ ವಿಶ್ವನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬೈಂದೂರು ವಲಯದ ವಿವಿಧ ಶಾಲೆಗಳ ಮುಖ್ಯಸ್ಥರು, ಶಾಲಾ ವಾಹನಗಳ ಚಾಲಕ ಹಾಗೂ ಮಾಲೀಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಸಂಚಾರಿ ಅಪಘಾತಗಳು ನಮ್ಮಿಂದಲೇ ನಿಯಂತ್ರಣ ಆಗಬೇಕು. ಸಾಮಾನ್ಯ ಸಂಚಾರಿ ನಿಯಮಗಳ ಅರಿವು ಅಗತ್ಯ. ಅವುಗಳನ್ನು ಪಾಲಿಸಿ ಅವಘಡ ಆಗದಂತೆ ಎಚ್ಚರ ವಹಿಸೋಣ. ಅಪಘಾತ ಆದ ಬಳಿಕದ ಪರಿಣಾಮಗಳು ಭಯಾನಕವಾಗಿರುತ್ತದೆ. -ನವೀನ್ ಬೋರ್ಕರ್ ಬೈಂದೂರು ಪೊಲೀಸ್ ಉಪನಿರೀಕ್ಷಕ https://www.vijayavani.net/ankita-to-state-level-in-hammer-throw https://www.vijayavani.net/kannada-rathotsav-sarvajana-program