

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಸೋಮೇಶ್ವರ ಸಮುದ್ರ ತೀರದಲ್ಲಿರುವ ರುದ್ರಪಾದೆಯಿಂದ ಭಾನುವಾರ ಬೆಳಗ್ಗೆ ವಿದ್ಯಾರ್ಥಿನಿಯೊಬ್ಬಳು ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಜೀವರಕ್ಷಕ ಸಿಬ್ಬಂದಿ ಮತ್ತು ಸ್ಥಳೀಯ ಈಜುಗಾರರು ರಕ್ಷಿಸಿದ್ದಾರೆ.
ಕೋಟೆಕಾರು ಮಾಡೂರಿನ ಬಾಡಿಗೆ ಮನೆಯಲ್ಲಿ ವಾಸವಿದ್ದು ಮಂಗಳೂರಿನಲ್ಲಿರುವ ಕಾಲೇಜಿನ ಪದವಿ ವಿದ್ಯಾರ್ಥಿನಿ ಭಾನುವಾರ ಬೆಳಗ್ಗೆ ಸೊಮೇಶ್ವರಕ್ಕೆ ಬಂದಿದ್ದು, ರುದ್ರಪಾದೆಯ ಮೇಲೇರಿ ಏಕಾಏಕಿ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ವೇಳೆ ರುದ್ರಪಾದೆಯಲ್ಲಿದ್ದ ಹೊರರಾಜ್ಯದ ವಲಸೆ ಕಾರ್ಮಿಕನೊಬ್ಬ ಆಕೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಸಮುದ್ರಕ್ಕೆ ಹಾರಿದ್ದಾನೆ. ಈ ವೇಳೆ ನೀರಿನಲ್ಲಿ ಮುಳುಗೇಳುತ್ತಾ ಸಾವಿನ ದವಡೆಯಲ್ಲಿದ್ದ ವಿದ್ಯಾರ್ಥಿನಿಯನ್ನು ಹಿಡಿದ ಕಾರ್ಮಿಕ ದಡದತ್ತ ತರುವ ನಿಟ್ಟಿನಲ್ಲಿ ಪ್ರಯತ್ನಿಸಿದ್ದಾನೆ. ಆದರೆ ಅದಾಗಲೇ ಪ್ರಾಣ ಸಂಕಟದಲ್ಲಿದ್ದ ವಿದ್ಯಾರ್ಥಿನಿ ತನ್ನನ್ನು ತಾನು ಬದುಕಿಸಿಕೊಳ್ಳುವ ನಿಟ್ಟಿನಲ್ಲಿ ವಲಸೆ ಕಾರ್ಮಿಕನನ್ನು ಗಟ್ಟಿಯಾಗಿ ಬಿಗಿದಪ್ಪಿದ ಪರಿಣಾಮ ಆತನೂ ನಿಯಂತ್ರಣ ಕಳೆದುಕೊಂಡಿದ್ದು, ಇದರ ಪರಿಣಾಮ ಇಬ್ಬರೂ ನೀರುಪಾಲಾಗುವ ಅಪಾಯಕ್ಕೆ ಸಿಲುಕಿದ್ದರು. ಈ ಸಂದರ್ಭ ಸ್ಥಳದಲ್ಲಿದ್ದ ಕರಾವಳಿ ಕಾವಲು ಪಡೆಯ ಜೀವರಕ್ಷಕ ಸಿಬ್ಬಂದಿ ಸುಜಿತ್ ಅವರು ಟಯರ್‌ಟ್ಯೂಬ್ ಬಳಸಿ ಸಮುದ್ರಕ್ಕೆ ಜಿಗಿದಿದ್ದು, ಸ್ಥಳೀಯರ ಸಹಕಾರದಲ್ಲಿ ಇಬ್ಬರನ್ನೂ ದಡಕ್ಕೆ ಎಳೆದು ತರುವಲ್ಲಿ ಯಶಸ್ವಿಯಾಗಿದ್ದಾರೆ. ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.